ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಮೂರನೇ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಅವರು ಇಂದು ವಾರಣಾಸಿಯಲ್ಲಿ 5 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಮೋದಿ ರೋಡ್ ಶೋ ಆರಂಭವಾಗಿದೆ. ನಾಳೆ ನಾಮಪತ್ರ ಸಲ್ಲಿಕೆಗೆ ಮೊದಲು ರೋಡ್ ಶೋ ಮೂಲಕ ಮೋದಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪ್ರಧಾನಿಯೊಂದಿಗೆ ತೆರೆದ ವಾಹನದಲ್ಲಿ ರೋಡ್ ಶೋನಲ್ಲಿ ಭಾಗಿಯಾಗಿ ಜನರತ್ತ ಕೈ ಬೀಸಿದ್ದಾರೆ.
ಮೋದಿ ಮತ್ತು ಯೋಗಿ ಆದಿತ್ಯನಾಥ್ ರೋಡ್ ಶೋ ವೀಕ್ಷಿಸಲು ಲಕ್ಷಾಂತರ ಜನ ಸೇರಿದ್ದಾರೆ. ವಿವಿಧ ವೇಷಶಭೂಷಣಗಳನ್ನು ಧರಿಸಿದ ಕಲಾವಿದರು, ಜಾನಪದ ಕಲಾತಂಡಗಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಮೆರುಗು ತಂದಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಲಕ್ಷಾಂತರ ಮಂದಿ ಮೋದಿ, ಬಿಜೆಪಿ ಪರವಾಗಿ ಘೋಷಣೆ ಕೂಗಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ, ಮನೆ, ಕಟ್ಟಡಗಳ ಮೇಲೆ ನಿಂತು ಮೋದಿಯವರ ರೋಡ್ ಶೋ ವೀಕ್ಷಿಸಿದ್ದಾರೆ.