ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಎರಡನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಏಪ್ರಿಲ್ 14 ರಂದು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದು, ಮಂಗಳೂರಿನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಕಳೆದ ಮಾರ್ಚ್ 16 ರಂದು ಪ್ರಧಾನಿ ಮೋದಿ ಕಲಬುರಗಿಗೆ ಆಗಮಿಸಿದ್ದರು. ಅವತ್ತೇ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿತ್ತು. ಮಾರ್ಚ್ 18ರಂದು ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೋದಿ ಭಾಗವಹಿಸಿದ್ದರು.
ಏಪ್ರಿಲ್ 14ರಂದು ಮೋದಿ ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಮತ್ತು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆ ಮತ್ತು ರೋಡ್ ಶೋ ನಡೆಸಲಿದ್ದಾರೆ. ಚಿಕ್ಕಬಳ್ಳಾಪುರ ಸಮಾವೇಶದಲ್ಲಿ ಭಾಗವಹಿಸುವ ಅವರು ನಂತರ ರಾಮನಗರ ಅಥವಾ ಚನ್ನಪಟ್ಟಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.
ಸಂಜೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬ್ಯಾಟರಾಯನಪುರ ಮತ್ತು ಹೆಬ್ಬಾಳದಲ್ಲಿ ಸುಮಾರು 10 ಕಿ.ಮೀ ದೂರ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ ಎನ್ನಲಾಗಿದ್ದು, ಮೋದಿ ಪ್ರಚಾರಕ್ಕೆ ಬರುತ್ತಿರುವುದು ಬಿಜೆಪಿ, ಜೆಡಿಎಸ್ ನಾಯಕರಲ್ಲಿ ಉತ್ಸಾಹ ತಂದಿದೆ.