ಕಜಕಿಸ್ತಾನ್‌ನಲ್ಲಿ ಇತ್ತೀಚೆಗೆ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿ 38 ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು, ರಷ್ಯಾದ ಭೂಪ್ರದೇಶದಿಂದ ಹಾರಿದ ಗುಂಡಿನಿಂದ ವಿಮಾನ ವಿಮಾನ ಪತನವಾಗಿದೆ ಎಂದು ಹೇಳಿದ್ದಾರೆ ಎಂದು ಅಜೆರ್ಬೈಜಾನ್ ರಾಜ್ಯ ದೂರದರ್ಶನ ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅಧ್ಯಕ್ಷ ಅಲಿಯೆವ್ ಈ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ರಷ್ಯಾದಲ್ಲಿ ಕೆಲವು ವಲಯಗಳಿಂದ ಅಪಘಾತದ ಕಾರಣಗಳ ಬಗ್ಗೆ ಸುಳ್ಳು ಹೇಳುವ ಮೂಲಕ ಸತ್ಯವನ್ನು ಮರೆ ಮಾಚಲು ಪ್ರಯತ್ನಿಸುತ್ತಿವೆ ಎಂದು ಅವರು ಟೀಕಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವಿಮಾನ ಅಪಘಾತಕ್ಕೆ ಕ್ಷಮೆಯಾಚಿಸಿದ ಒಂದು ದಿನದ ನಂತರ ಅಜೆರ್ಬೈಜಾನ್ ಅಧ್ಯಕ್ಷರ ಹೇಳಿಕೆ ಬಂದಿದೆ. ಇದು ರಷ್ಯಾದ ವಾಯುಪ್ರದೇಶದಲ್ಲಿ ಉಕ್ರೇನಿಯನ್ ಡ್ರೋನ್‌ಗಳಿಗೆ ಪ್ರತಿಕ್ರಿಯೆಯಾಗಿ ಅದರ ವಾಯು ರಕ್ಷಣೆಯನ್ನು ಸಕ್ರಿಯಗೊಳಿಸಿದ “ದುರಂತ ಘಟನೆ” ಎಂದು ರಷ್ಯಾ ತಿಳಿಸಿದೆ.
ಅಜರ್ ಬೈಜಾನ್ ಅಧ್ಯಕ್ಷ ಇಲ್ಯಾಮ್ ಅಲಿಯೆವ್ ಅವರಿಗೆ ಕರೆ ಮಾಡಿದ ಪುಟಿನ್ ಅವರು ರಷ್ಯಾ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಅವರು ಕ್ಷಮೆಯಾಚಿಸಿದ ಪರಿ ಮತ್ತು ರಷ್ಯಾ ಸರ್ಕಾರದ ಅಧಿಕೃತ ಹೇಳಿಕೆಯಿಂದ ಅಜರ್ ಬೈಜಾನ್ ಗೆ ಸೇರಿದ ವಿಮಾನವನ್ನು ರಷ್ಯಾ ಸೇನೆಯೇ ಹೊಡೆದುರುಳಿಸಿದೆ ಎಂದು ಅವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.