ರಾಯ್‌ಪುರ: ರಾಯ್ ಪುರ ಸಮೀಪದ ಹಳ್ಳಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಭತ್ತ ಕೊಯ್ಲು ಮಾಡಿದರು. ಕೃಷಿಕರೊಂದಿಗೆ ರಾಹುಲ್ ಗಾಂಧಿ ಭತ್ತ ಕೊಯ್ಲು ಮಾಡಿದ್ದು, ಛತ್ತೀಸ್ ಗಢದಲ್ಲಿ ತಮ್ಮ ಪಕ್ಷದ ಸರ್ಕಾರದ “ಮಾದರಿ” ಭಾರತದಾದ್ಯಂತ ಪುನರಾವರ್ತಿಸಲಾಗುವುದು ಎಂದು ಹೇಳಿದ್ದಾರೆ.
ಸಾಲ ಮನ್ನಾ ಮತ್ತು ಇನ್ ಪುಟ್ ಸಬ್ಸಿಡಿ ಸೇರಿದಂತೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳನ್ನು ರೈತರ ಹಿತಾಸಕ್ತಿಯಲ್ಲಿ ಉತ್ತಮ ಕೆಲಸಗಳೆಂದು ಹೇಳಿದ್ದಾರೆ.
“ರೈತರು ಸಂತೋಷವಾಗಿದ್ದರೆ ಭಾರತವು ಸಂತೋಷವಾಗಿರುತ್ತದೆ” ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದರು.
ಅವರು ಬೆಳಿಗ್ಗೆ ರಾಜ್ಯದ ರಾಜಧಾನಿ ರಾಯ್‌ಪುರ ಸಮೀಪದ ಕಥಿಯಾ ಗ್ರಾಮಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ರೈತರು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿ ಭತ್ತ ಕಟಾವು ಮಾಡಿದರು. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಉಪಮುಖ್ಯಮಂತ್ರಿ ಟಿ.ಎಸ್ ಸಿಂಗ್ ದೇವ್ ಅವರು ಜೊತೆಗಿದ್ದರು.
ರೈತರೊಂದಿಗೆ ಭತ್ತದ ಗದ್ದೆಯಲ್ಲಿ ಕೆಲಸ ಮಾಡುವ ಮತ್ತು ಅವರೊಂದಿಗೆ ಸಂವಾದ ನಡೆಸುತ್ತಿರುವ ಗಾಂಧಿಯವರ ಚಿತ್ರಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.