ಲೋಕಸಭೆ ಚುನಾವಣೆ 2024 ಅಂತಿಮ ಹಂತದಲ್ಲಿದ್ದು ಉತ್ತರ ಪ್ರದೇಶದ 13 ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ. ಈ ಬಗ್ಗೆ ರಾಜಾಸ್ತಾನದ ಬೆಟ್ಟಿಂಗ್ ಮಾರ್ಕೆಟ್ ಫಲೋಡಿ ಸಟ್ಟಾ ಬಜಾರ್ ಬಿಜೆಪಿ ಆಡಳಿತದ ರಾಜ್ಯ ಉತ್ತರಪ್ರದೇಶದಲ್ಲಿ ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಸ್ಥಾನ ಪಡೆಯಲಿವೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದೆ.
ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 2019 ರ ಲೋಕಸಭಾ ಚುನಾವಣೆಯ ಯಶಸ್ಸನ್ನು ಪುನರಾವರ್ತಿಸಬಹುದು ಎಂದು ಫಲೋಡಿ ಸಟ್ಟಾ ಬಜಾರ್‌ನ ಭವಿಷ್ಯ ನುಡಿದಿದೆ.
2019ರಲ್ಲಿ ಉತ್ತರಪ್ರದೇಶ ರಾಜ್ಯದ 80 ಲೋಕಸಭಾ ಸ್ಥಾನಗಳ ಪೈಕಿ 64 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 60ರಿಂದ 65 ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ಸಟ್ಟಾ ಬಜಾರ್ ಲೆಕ್ಕಾಚಾರ. ಅದೇ ರೀತಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಇಂಡಿ ಮೈತ್ರಿಕೂಟ 15ರಿಂದ 20 ಸ್ಥಾನ ಗಳಿಸುವ ನಿರೀಕ್ಷೆಯಿದೆ.
ಇಡೀ ದೇಶದ ಲೆಕ್ಕಾಚಾರದಲ್ಲಿ ಬಿಜೆಪಿ 300 ಸ್ಥಾನ ಗೆದ್ದರೆ ಕಾಂಗ್ರೆಸ್ ಕೇವಲ 40 ರಿಂದ 42 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಊಹಿಸಲಾಗಿದೆ.
2024 ರ ಲೋಕಸಭಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತವು ಜೂನ್ 1 ರಂದು ನಡೆಯಲಿದೆ. ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢದಲ್ಲಿನ ಒಟ್ಟು ಈ 57 ಲೋಕಸಭಾ ಕ್ಷೇತ್ರಗಳಿಂದ 904 ಅಭ್ಯರ್ಥಿಗಳು ಕಣದಲ್ಲಿದ್ದಾರೆ.