ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಬಯಸಿದ ವಿವಿಧ ವರ್ಗಗಳ ಅರ್ಹ ನೀಟ್ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಇಂದು ಮತ್ತು ನಾಳೆ ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದ್ದು, ಸೆಪ್ಟಂಬರ್ 25, 26ರಂದು ಮೂಲ ದಾಖಲಾತಿಗಳ ಪರಿಶೀಲನೆಗೆ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಬಯಸಿದ ವಿವಿಧ ವರ್ಗಗಳ ಅಭ್ಯರ್ಥಿಗಳು ಹಾಜರಾಗುವಂತೆ ತಿಳಿಸಿದೆ.
ವೈ ವರ್ಗದಲ್ಲಿ ಬರುವ ಕರ್ನಾಟಕದ ಹೊರಗಿನ ಅಭ್ಯರ್ಥಿಗಳೇನಾದರೂ ಅನಿವಾಸಿ ಭಾರತೀಯ ವಿದ್ಯಾರ್ಥಿ ಅಥವಾ ಅಲ್ಪಸಂಖ್ಯಾತ ಕೋಟಾದಡಿ ಪ್ರವೇಶ ಬಯಸಿದಲ್ಲಿ ಅಂತವರು ಕೂಡ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ http://kea.kar.nic.in ವೆಬ್ಸೈಟ್ ನಲ್ಲಿ ಈ ಕುರಿತ ವೇಳಾಪಟ್ಟಿ ಪ್ರಕಟಿಸಲಾಗಿದೆ. ವೈ ವರ್ಗದಡಿ ಬರುವ ರಾಜ್ಯದ ಹೊರಗಿನ ಅಭ್ಯರ್ಥಿಗಳು ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳವ ಮೊದಲು ವೆರಿಫಿಕೇಷನ್ ಡೌನ್ಲೋಡ್ ಮಾಡಿಕೊಂಡು, ತಮ್ಮ ಆಪ್ಷನ್ಸ್ ದಾಖಲಿಸಬೇಕು. ಸೀಟು ಹಂಚಿಕೆಯಾದಲ್ಲಿ ಅಂತಹ ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಮೂಲ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಿ ತಮಗೆ ಸೀಟು ಹಂಚಿಕೆಯಾದ ಕಾಲೇಜುಗಳಲ್ಲಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಲು ತಿಳಿಸಲಾಗಿದೆ.