ಆನ್‌ಲೈನ್ ಪೀಠೋಪಕರಣ ಕಂಪನಿ ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ಮತ್ತು ಸಿಇಒ ಅಂಬರೀಶ್ ಮೂರ್ತಿ ಹೃದಯಾಘಾತದಿಂದಾಗಿ ಮರಣ ಹೊಂದಿದ್ಧಾರೆ. ಆ ಸಮಯದಲ್ಲಿ ಅವರು ಲೇಹ್‌ನಲ್ಲಿದ್ದರು.
51 ವರ್ಷದಲ್ಲೂ ಅಂಬರೀಶ್ ಬೈಕ್ ರೈಡ್, ಟ್ರೆಕ್ಕಿಂಗ್ ಮಾಡುವ ಅಭ್ಯಾಸವನ್ನ ಇಟ್ಟುಕೊಂಡಿದ್ದರು. ಆಗಾಗ ತಮ್ಮ ಈ ಅನುಭವನ್ನ ಇನ್ಸ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇವರು ಶೇರ್ ಮಾಡಿಕೊಳ್ಳುತ್ತಿದ್ದರು. ಅವರ ಕೊನೆಯ ಇನ್ಸ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಾವು ಮಾಡಿರೋ ಸಾಹಸದ ಅನುಭವನ್ನ ಹೇಳಿಕೊಂಡಿದ್ದಾರೆ. ಈ ವಿಡಿಯೋ ಅಗಸ್ಟ್ 6ರಂದು ಪೋಸ್ಟ್ ಮಾಡಲಾಗಿದೆ. ಅದಕ್ಕೆ ’ಮೋಟಾರ್ ಸೈಕಲ್ ಡೈರೀಸ್’ ಎಂದು ಶೀರ್ಷಿಕೆ ಕೊಡಲಾಗಿದೆ.
ಈ ವಿಡಿಯೋನಲ್ಲಿ ಅವರು ’ ನನ್ನ ಮೋಟರ್ ಸೈಕಲ್ ಗೇರ್‌ನಲ್ಲಿ ಕೆಲ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೂ ನನಗೆ ಏನೂ ಅಪಾಯ ಆಗಿರಲಿಲ್ಲ. ಬಹುಶಃ ದೇವರಿಗೆ ದೇವದೂತನ ರೀತಿಯಲ್ಲಿ ನನ್ನನ್ನು ತನ್ನ ಬಳಿಗೆ ಕರೆಸಿಕೊಳ್ಳಲು ಇಷ್ಟವಿರಲಿಕ್ಕಿಲ್ಲ.’ ಎಂದಿದ್ದರು.
ಲಡಾಕ್‌ನ ನಿರ್ಜನ ರಸ್ತೆ ಮಧ್ಯದಲ್ಲಿ ನಿಂತು ಮಾಡಿರುವ, ಈ 1ನಿಮಿಷ 30ಸೆಕೆಂಡ್‌ನ ವಿಡಿಯೋದಲ್ಲಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನ ತೋರಿಸುತ್ತ ’ಇದು ಬೈಕರ್‌ಗಳಿಗೆ ಸ್ವರ್ಗ’ ಎಂದು ಹೇಳುವುದನ್ನ ಗಮನಿಸಬಹುದು. ಅಷ್ಟೆ ಅಲ್ಲ ’ದೇವರು ಏನಾದರೂ ಬೈಕರ್ಸ್ ಮುಂದೆ ಬಂದು ಸ್ವರ್ಗ ಹೇಗಿರಬೇಕು ಅಂತ ಕೇಳಿದ್ರೆ, ಅವರು ಕೂಡ ಮನಾಲಿ-ಲೇಹ್‌ನಲ್ಲಿರುವ ಬಯಲು ಪ್ರದೇಶದ ಮಧ್ಯದಲ್ಲಿರುವ ಕಡುಗಪ್ಪು ಉದ್ದನೆಯ ರಸ್ತೆಗಳನ್ನ ಹೊಂದಿರೋ ಸ್ವರ್ಗವನ್ನೇ ಕಲ್ಪಿಸಿಕೊಳ್ಳಬಹುದು.’ ಎಂದು ಹೇಳಿದ್ದಾರೆ.
ಇದೇ ವಿಡಿಯೋದಲ್ಲಿ ಅವರು ತಮ್ಮ ಬೈಕ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನೂ ಕೂಡ ಹೇಳಿಕೊಂಡಿದ್ದಾರೆ. ’ನನ್ನ ಬೈಕ್ ಗೇರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಮೂರು, ನಾಲ್ಕು ಹಾಗೂ ಐದನೇ ಗೇರ್ ಬದಲಾಯಿಸೊದಕ್ಕೆ ನನ್ನಿಂದ ಆಗ್ತಿರಲಿಲ್ಲ. ಅದೇ ಕಾರಣಕ್ಕೆ ನಾನು ಒಂದನೇ ಗೇರ್‌ನಲ್ಲಿ ಬೈಕ್ ಓಡಿಸುತ್ತ ಬಂದೆ. ಕೊನೆಗೆ ಗೇರ್ ಸರಿಪಡಿಸಲು ಅಲ್ಲೇ ಇದ್ದ ಕಲ್ಲನ್ನ ತೆಗೆದುಕೊಂಡು ಜೋರಾಗಿ ಹೊಡದೆ. ಆಗ ಅದು ತನ್ನಿಂದ ತಾನೇ ಸರಿ ಹೋಯಿತು. ಐನ್‌ಸ್ಟೇನ್ ಇದ್ದರೂ ಇದನ್ನೇ ಮಾಡೋರೋ ಏನು’ ಎಂದು ಹೇಳಿಕೊಂಡಿದ್ದಾರೆ.
ಅಂಬರೀಶ್ ಮೂರ್ತಿಯವರು ಆಶೀಷ್ ಷಾ ಅವರ ಜೊತೆ ಸೇರಿ 2012 ರಲ್ಲಿ ಪೆಪ್ಪರ್ ಫ್ರೈ ಕಂಪನಿ ಆರಂಭಿಸಿದ್ದರು. ಅದು ಯಶಸ್ವಿ ಕೂಡ ಆಗಿದೆ. ಆದರೆ ಈಗ ಅಂಬರೀಶ್ ಅವರ ಅಗಲುವಿಕೆಯಿಂದಾಗಿ ಆಶೀಶ್ ಷಾ ಗೆಳೆಯನನ್ನ ಕಳೆದುಕೊಂಡ ನೋವಲ್ಲಿದ್ದಾರೆ.