ಬೆಂಗಳೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ಅನರ್ಹರನ್ನು ಪತ್ತೆ ಮಾಡಿ ಪಾವತಿಯಾಗುತ್ತಿದ್ದ ಹಣಕ್ಕೆ ಕಂದಾಯ ಇಲಾಖೆ ತಡೆ ನೀಡಿದೆ.
ನಕಲಿ ದಾಖಲೆ ಸಲ್ಲಿಕೆ ಮಾಡಿದ, ಸೂಕ್ತ ದಾಖಲೆ ಇಲ್ಲದ, ಖಾತೆಗೆ ಆಧಾರ್ ಜೋಡಣೆ ಮಾಡದವರ ಪಿಂಚಣಿಯನ್ನು ರದ್ದು ಮಾಡಲಾಗಿದೆ. ಸುಮಾರು 3 ಕೋಟಿ ರೂ. ಹಣ ವಸೂಲಿ ಮಾಡಲಾಗಿದೆ. ನಕಲಿ ಫಲಾನುಭವಿಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ನವೋದಯ ಮೊಬೈಲ್ ಆಧಾರಿತ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿದ್ದು, 83,565 ಜನರ ಪಿಂಚಣಿ ಸ್ಥಗಿತ ಮಾಡಲಾಗಿದೆ. ಆಧಾರ್ ಜೋಡಣೆ ಮಾಡದ 35,204 ಅನರ್ಹರ ಪಿಂಚಣಿಯನ್ನು ನಿಲ್ಲಿಸಲಾಗಿದೆ.
ಅನರ್ಹರು ಪಿಂಚಣಿ ಪಡೆಯುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ನಿಂದಲೂ ಕಂದಾಯ ಇಲಾಖೆ ಪರಿಶೀಲನೆ ಕಾರ್ಯ ಕೈಗೊಂಡು ಇಷ್ಟೊಂದು ಜನರ ಪಿಂಚಣಿಗೆ ತಡೆ ನೀಡಿದೆ. ಆಧಾರ್ ಜೋಡಣೆ ಮಾಡದ ಫಲಾನುಭವಿಗಳ ಪಿಂಚಣಿ ತಡೆ ಹಿಡಿದಿದ್ದು, ದಾಖಲೆ ಸಲ್ಲಿಸಿದ ಪಿಂಚಣಿದಾರರಿಗೆ ಮತ್ತೆ ಪಿಂಚಣಿ ನೀಡಲಾಗುತ್ತಿದೆ. ಕೆಲವರು ಎರಡು ಪಿಂಚಣಿ ಪಡೆದು ಸರ್ಕಾರದ ಸೌಲಭ್ಯ ಪಡೆದುಕೊಂಡಿರುವುದು ಪರಿಶೀಲನೆಕೆಯಲ್ಲಿ ಗೊತ್ತಾಗಿದೆ. 60 ವರ್ಷ ಆಗದವರು ಕೂಡ ವೃದ್ಧಾಪ್ಯ ವೇತನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಕೆಲವರು ಸಂಧ್ಯಾ ಸುರಕ್ಷಾ ಯೋಜನೆಯ ಹಣವನ್ನು ಪಡೆದುಕೊಂಡಿದ್ದು, ಇಂತಹ 30,000 ಪ್ರಕರಣಗಳಲ್ಲಿ ಪಿಂಚಣಿ ಸ್ಥಗಿತ ಮಾಡಲಾಗಿದೆ ಎಂದು ಹೇಳಲಾಗಿದೆ.