ನವದೆಹಲಿ: ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆದಿದ್ದು, ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ಕಾನೂನು ಸಚಿವ ಅರ್ಜುನ್ ರಾಮ್, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಬಿಲ್ ಮಂಡಿಸಿದರು. ಮಹಿಳಾ ಮೀಸಲಾತಿಗಾಗಿ ಹಲವು ವರ್ಷಗಳಿಂದ ಬೇಡಿಕೆ ಕೇಳಿಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳಾ ಮೀಸಲಾತಿಗೆ ಸಮ್ಮತಿ ಸೂಚಿಸಿದೆ ಎಂದು ತಿಳಿಸಿದರು.
ಈ ಮೂಲಕ ಸಂಸತ್, ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ. ಸಚಿವರು ಬಿಲ್ ಮಂಡಿಸುತ್ತಿದ್ದಂತೆ ಆಡಳಿತ ಪಕ್ಷದ ನಾಯಕರು ಮೇಜು ಕುಟ್ಟಿ ಸ್ವಾಗತಿಸಿದ್ದಾರೆ. ಆದರೆ ಕೆಲ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಬಲೀಕರ, ಮಹಿಳಾ ಸಶಕ್ತಿಕರಣಕ್ಕೆ ಮತ್ತಷ್ಟು ಶಕ್ತಿ ತುಂಬ ಕೆಲಸ ಮಾಡುವ ಅವಕಾಶ ನನಗೆ ಒಲಿದು ಬಂದಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಕಾನೂನು ತರುವುದು ನನಗೆ ಒಲಿದ ಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.