
ಮಾಲ್ ಗಳ ಪಾರ್ಕಿಂಗ್ ಲಾಟ್ ನಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಿದ ಸಂದರ್ಭದಲ್ಲಿ ಅದು ಕಳುವಾದರೆ ಅದಕ್ಕೆ ಪಾರ್ಕಿಂಗ್ ಲಾಟ್ ನೋಡಿಕೊಳ್ಳುವ ಉಸ್ತುವಾರಿ ಹೊತ್ತವರು ಹೊಣೆಗಾರರು ಎಂದು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ಮಹತ್ವದ ಆದೇಶದಲ್ಲಿ ಹೇಳಿದೆ.
2019ರಲ್ಲಿ ನಡೆದಿದ್ದ ಈ ಪ್ರಕರಣದ ತೀರ್ಪು ಈಗ ಹೊರ ಬಿದ್ದಿದ್ದು, ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದ ವಾಹನ ಮಾಲೀಕರಿಗೆ ಬೈಕಿನ ಮೌಲ್ಯ 1,06,288 ರೂಪಾಯಿ, ನಿರ್ಲಕ್ಷದ ವರ್ತನೆಗೆ 10,000 ಮತ್ತು ನ್ಯಾಯಾಲಯದ ವೆಚ್ಚ 5 ಸಾವಿರ ರೂಪಾಯಿ ಸೇರಿಸಿ ಒಟ್ಟು ರೂ.1,21,288 ರೂಪಾಯಿಗಳ ಪರಿಹಾರ ಪಾವತಿಸುವಂತೆ ಪಾರ್ಕಿಂಗ್ ಮ್ಯಾನೇಜ್ಮೆಂಟ್ ಉಸ್ತುವಾರಿ ಹೊತ್ತಿದ್ದ ಪೌಲ್ ಸ್ಪೇಸ್ ಸ್ಪಿರಿಟ್ ಕಂಪನಿಗೆ ಸೂಚನೆ ನೀಡಿದೆ.
ಪ್ರಕರಣದ ವಿವರ: ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸಿ ನಾರಾಯಣಸ್ವಾಮಿ ಎಂಬವರು 2019ರ ಆಗಸ್ಟ್ 3ರಂದು ಸೆಂಟ್ರಲ್ ಸ್ಪಿರಿಟ್ ಮಾಲ್ ಗೆ ಸಿನಿಮಾ ವೀಕ್ಷಣೆಗೆ ತೆರಳಿದ್ದು, ಪಾರ್ಕಿಂಗ್ ಲಾಟ್ ನಲ್ಲಿ ತಮ್ಮ ಬೈಕ್ ನಿಲ್ಲಿಸಿದ್ದರು. ಇದಕ್ಕಾಗಿ ಅವರು ಹಣವನ್ನೂ ಪಾವತಿಸಿದ್ದು ಸಿನಿಮಾ ವೀಕ್ಷಿಸಿ ಹೊರ ಬಂದಾಗ ಅವರ ಬೈಕು ಕಳುವಾಗಿತ್ತು.
ಈ ಸಂಬಂಧ ಪಾರ್ಕಿಂಗ್ ಹೊಣೆಗಾರಿಕೆ ವಹಿಸಿಕೊಂಡಿದ್ದವರಿಗೆ ನಾರಾಯಣಸ್ವಾಮಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದ ಅವರು, ಬೈಕ್ ಕಳುವಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ಲಕ್ಷ್ಯದಿಂದ ಹೇಳಿ ಕಳುಹಿಸಿದ್ದರು. ಬಳಿಕ ನಾರಾಯಣಸ್ವಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ.
ವಾಹನ ಕಳುವಿಗೆ ಪಾರ್ಕಿಂಗ್ ಲಾಟ್ ಜವಾಬ್ದಾರಿ ಹೊತ್ತುಕೊಂಡವರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ಸಹ ತಿಳಿಸಿದ್ದು, ಆದರೆ ಸಂಸ್ಥೆ ಪರಿಹಾರ ನೀಡಿರಲಿಲ್ಲ. ಇದರಿಂದ ಬೇಸತ್ತ ನಾರಾಯಣಸ್ವಾಮಿ ಬೆಂಗಳೂರಿನ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು ಇದೀಗ ಅವರ ಪರ ತೀರ್ಪು ಹೊರ ಬಿದ್ದಿದೆ.