alex Certify ಬಿಜೆಪಿಯ ಇಂದಿನ ಸ್ಥಿತಿಯ ಬಗ್ಗೆ ಪರಿವಾರದ ನಾಯಕರು ಯೋಚಿಸಬೇಕಿದೆ; ಕೆ.ಎಸ್. ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಯ ಇಂದಿನ ಸ್ಥಿತಿಯ ಬಗ್ಗೆ ಪರಿವಾರದ ನಾಯಕರು ಯೋಚಿಸಬೇಕಿದೆ; ಕೆ.ಎಸ್. ಈಶ್ವರಪ್ಪ

ಧಾರ್ಮಿಕ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಆರೋಪ: ಕೆಎಸ್​ ಈಶ್ವರಪ್ಪ ವಿರುದ್ಧ ಕೇಸ್ ದಾಖಲು - Allegation of election campaign in religious center case filed against ks eshwarappa ggs Kannada News

ಶಿವಮೊಗ್ಗ: ರಾಜ್ಯದ ಬಿಜೆಪಿಯ ದುಸ್ಥಿತಿಯನ್ನು ಕೇಂದ್ರ ಮತ್ತು ರಾಜ್ಯದ ನಾಯಕರು ಜೊತೆಗೆ ಪರಿವಾರದ ನಾಯಕರು ಯೋಚಿಸಬೇಕಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಮತ್ತಷ್ಟು ವಿಜೃಂಭಿಸಬೇಕಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಲ್ಲಿನ ನ್ಯೂನತೆಗಳು ಸರಿಯಾಗಬೇಕು. ಕುಟುಂಬ ರಾಜಕಾರಣ ಕೊನೆಗೊಳ್ಳಬೇಕು. ಹಿಂದುತ್ವವಾದಿಗಳ ಶಕ್ತಿಯನ್ನು ಕುಗ್ಗಿಸುವುದನ್ನು ತಡೆಗಟ್ಟಬೇಕು. ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಮುನ್ನಡೆಯಬೇಕು ಎಂಬ ಹಲವು ಉದ್ದೇಶಗಳನ್ನು ಇಟ್ಟುಕೊಂಡು ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ ಹೊರತು ಗೆಲ್ಲಲೇಬೇಕು ಎಂಬ ಹಠದಿಂದ ಅಲ್ಲ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳನ್ನು ಕಡೆಗಾಣಿಸಿದ್ದರಿಂದ ಅಪ್ಪ ಮಕ್ಕಳ ಮಾತುಗಳನ್ನೇ ಕೇಳಿದ್ದರಿಂದ ರಾಜ್ಯದಲ್ಲಿ 9 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಕುರುಬ ಸಮಾಜಕ್ಕೆ ಒಂದೇ ಒಂದು ಸ್ಥಾನವನ್ನು ಇವರು ನೀಡಲಿಲ್ಲ. ಬಿಜೆಪಿಯ ಈ ದುಸ್ಥಿತಿಗೆ ಬರಲು ಇಲ್ಲಿಯ ನಾಯಕರೇ ಕಾರಣರಾಗಿದ್ದಾರೆ. ಹಿಂದುಳಿದ ಸಮಾಜವನ್ನು ಇವರು ಬೆಳೆಸಲಿಲ್ಲ. ಬೆಳೆಯಲು ಬಿಡಲಿಲ್ಲ. ಬಿ.ಎಸ್. ಯಡಿಯೂರಪ್ಪನವರಿಂದ ಲಿಂಗಾಯತ ಸಮುದಾಯದ ಶಕ್ತಿ ಬಂದಿದೆ ಎಂಬುವುದು ನಿಜವಾದರೂ ಆ ಒಂದು ಸಮಾಜ ಸಾಕೆ ಎಂದರು.

ಶಿವಮೊಗ್ಗದಲ್ಲಿ ನರೇಂದ್ರ ಮೋದಿಯವರು ಗೆದ್ದಿದ್ದಾರೆ. ಈಶ್ವರಪ್ಪ ಸೋಲುತ್ತಾರೆ ಅವರಿಗೆ ವೋಟು ಕೊಟ್ಟರೆ ಕಾಂಗ್ರೆಸ್ ಬಂದು ಬಿಡಬಹುದು ಎಂಬ ಆತಂಕದಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿದ್ದಾರೆ. ಇದು ನಿಜವಾದರೂ ಕೂಡ ನೋವಿನ ಸಂಗತಿ ಎಂದರೆ ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಈಗ 17 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ವಿಧಾನಸಭಾ ಚುನಾವಣೆಯಿಂದಲೂ ಬಿಜೆಪಿ ಕುಸಿಯುತ್ತ ಬಂದಿದೆ. ಕೇವಲ 66 ಸ್ಥಾನಕ್ಕೆ ನಾವು ಇಳಿದಿದ್ದೇವು. ಹಿಂದುಳಿದ ಸಮಾಜದ ತಾತ್ಸರ ಸಾಮೂಹಿಕ ನಾಯಕತ್ವದ ಕೊರತೆ ಇದಕ್ಕೆಲ್ಲ ಕಾರಣ ಎಂದರು.

ರಾಜ್ಯದಲ್ಲಿ ಬಿಜೆಪಿಯ ನಡೆ ಕೆಲವರ ಕೈಯಲ್ಲಿ ಮಾತ್ರ ಇದೆ. ಕೇಂದ್ರ ಮತ್ತು ರಾಜ್ಯದ ನಾಯಕರು ಇದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಪರಿವಾರದ ಮುಖಂಡರು ಕೂಡ ಇದನ್ನು ಯೋಚಿಸಬೇಕಾಗಿದೆ. ಬಿಜೆಪಿ ಕರಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಇದು ನನ್ನ ಬಯಕೆಯಾಗಿದೆ. ಕೇಂದ್ರದಲ್ಲಿಯೂ ಕೂಡ ನರೇಂದ್ರ ಮೋದಿಯವರು ಸ್ವತಂತ್ರವಾಗಿ ಪ್ರಧಾನಿಯಾಗುವುದಿಲ್ಲ ಎಂಬ ನೋವಿದೆ. ಕರ್ನಾಟಕ ಮನಸ್ಸು ಮಾಡಿದ್ದಾರೆ ಮೋದಿಯವರು ಬೇರೆಯವರ ಕೈಕಾಲು ಹಿಡಿಯುವುದನ್ನು ತಪ್ಪಿಸಬಹುದಿತ್ತು ಎಂದರು.

ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಬೇಕು. ಇದರಿಂದ ಬಿಜೆಪಿ ಪಕ್ಷಕ್ಕೆ ಶಕ್ತಿ ಬರಬೇಕು ಎಂಬ ಮಹತ್ವಕಾಂಕ್ಷೆಯಿಂದ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸ್ಥಾಪಿಸಿದೆ. ಅದು ದೊಡ್ಡ ಶಕ್ತಿ ಎಂದು ಗೊತ್ತಾದ ತಕ್ಷಣ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಕೇಂದ್ರ ನಾಯಕರಿಗೆ ಹೇಳಿ ನಿಲ್ಲಿಸಿಬಿಟ್ಟರು, ಸಂಗೊಳ್ಳಿರಾಯಣ್ಣ ಬ್ರಿಗೇಡ್ ಇದ್ದಿದ್ದರೆ ಬಿಜೆಪಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದರು.

ನಾನು ಸೋತಿರಬಹುದು ಆದರೆ ಕಾಲ ಹೀಗೆ ಇರುವುದಿಲ್ಲ. ನನ್ನ ಮುಂದಿನ ನಡೆಯ ಬಗ್ಗೆ ಈಗಲೇ ಏನು ಹೇಳುವುದಿಲ್ಲ. ಕಾಲ ಎಲ್ಲದಕ್ಕೂ ಉತ್ತರಕೊಡುತ್ತದೆ. ಇಷ್ಟರ ಮಧ್ಯೆ ನನ್ನ ಗೆಲುವಿಗಾಗಿ ಹಗಲು ರಾತ್ರಿ ಶ್ರಮವಹಿಸಿದ ನಮ್ಮ ಕಾರ್ಯಕರ್ತರಿಗೆ, ಮುಖಂಡರಿಗೆ, ನನಗೆ ಮತ ಹಾಕಿದ ಮತದಾರರಿಗೆ ಪ್ರೀತಿ ಪೂರ್ವಕ ನಮಸ್ಕಾರಗಳು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...