ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ಎಲ್ಲರೂ ಕನ್ನಡದಲ್ಲೇ ಮಾತನಾಡಬೇಕು, ಕನ್ನಡದಲ್ಲೇ ವ್ಯವಹರಿಸಬೇಕು ಎಂಬುದನ್ನು ಕನ್ನಡ ರಾಜ್ಯೋತ್ಸವದಂದು ಮಾತ್ರ ಹೇಳಲಾಗುತ್ತದೆ. ಆದರೆ ಅದೆಷ್ಟೋ ಬ್ಯಾಂಕ್, ಕಚೇರಿ, ಕಂಪನಿಗಳಲ್ಲಿ ಎಷ್ಟರ ಮಟ್ಟಿಗೆ ಕನ್ನಡದಲ್ಲಿ ವ್ಯವಹರಿಸುತ್ತಿದ್ದಾರೆ? ಎಂಬುದು ಪ್ರಶ್ನೆ. ಕನ್ನಡಿಗರೇ ಅದೆಷ್ಟೋ ಸಲ ಕನ್ನಡ ಭಾಷೆಯೇ ಬರುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಾರೆ. ಹೀಗಿರುವಾಗ ಇಲ್ಲೋರ್ವ ಪಂಜಾಬಿ ಕರ್ನಾಟಕ್ಕೆ ಬಂದು ಬದುಕು ಕಟ್ಟಿಕೊಂಡಿರುವುದೂ ಅಲ್ಲದೇ ಅಚ್ಚ ಕನ್ನಡದಲ್ಲಿಯೇ ವ್ಯವಹರಿಸುತ್ತಿರುವುದು ವಿಶೇಷ.
ಕರ್ನಾಟಕದಲ್ಲಿ ಬದುಕು ಕಟ್ಟಿಕೊಂಡು, ಕನ್ನಡ ಭಾಷೆ ಮತ್ತು ಕನ್ನಡಿಗರ ಬಗ್ಗೆ ಅಭಿಮಾನ ಹೊಂದಿರುವ ಇವರು ಹೊಸಪೇಟೆಯ ಬಳಿ ಖಾಲ್ಸಾ ಪಂಜಾಬಿ ಡಾಬಾ ನಡೆಸುತ್ತಿದ್ದಾರೆ. ಕನ್ನಡವನ್ನು ಕಲಿತು, ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದಾರೆ ಮಾತ್ರವಲ್ಲ, ಕನ್ನಡದಲ್ಲಿಯೇ ವ್ಯವಹರಿಸಿ ಎಂದು ಹೋಟೆಲ್ ಗೆ ಬೋರ್ಡ್ ಹಾಕುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ವಿಪರ್ಯಾಸವೆಂದರೆ ಇವರ ಪಂಜಾಬಿ ವೇಷಭೂಷಣಗಳನ್ನು ನೋಡಿ ನಮ್ಮವರೇ ಇವರ ಬಳಿ ಬೇರೆಭಾಷೆಯಲ್ಲಿ ಮಾತನಾಡಲು ಶುರುಮಾಡುತ್ತಾರೆ. ಆದರೆ ಹೋಟೆಲ್ ನಲ್ಲಿ ಅವರು ಹಾಕಿರುವ ಬೋರ್ಡ್ ನೋಡಿ ಒಮ್ಮೆ ಎಲ್ಲರಿಗೂ ಅಚ್ಚರಿಯಾಗದಿರದು.
ನಾವು ಕನ್ನಡಿಗರೇ, ’ನಮಗೆ ಕನ್ನಡ ಮಾತನಾಡಲು ಬರುತ್ತೆ, ಕನ್ನಡದಲ್ಲೇ ವ್ಯವಹರಿಸಿ’ ಎಂದು ನಾಮಫಲಕ ಹಾಕಿದ್ದಾರೆ. ಪಂಜಾಬಿ ಡಾಬಾ ಮಾಲೀಕನ ಕನ್ನಡ ಪ್ರೇಮಕ್ಕೆ ನಿಜಕ್ಕೂ ಬೆರಗಾಗಲೇಬೇಕು.