ಬೆಳಗಾವಿ: 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮುದಾಅದವರ ಹೋರಾಟ ಮುಂದುವರೆದಿದೆ. ಡಿ.16ರಿಂದ ಚಳಿಗಾಲದ ಅಧಿವೇಶನ ಮುಗಿಯುವರೆಗೂ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ನಿಮಗೆ ತಾಕತ್ತಿದ್ದರೆ ನಾವು ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾದ ಶಾಸಕರನ್ನು ವಜಾಗೊಳಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ನಮ್ಮ ಹೋರಾಟಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ್, ರಜು ಕಾಗೆ, ಪರಿಷ ಸದಸ್ಯ ಚನ್ನರಾಜಹಟ್ಟಿಹೊಳಿ ಎಲ್ಲರೂ ಬೆಂಬಲ ನೀಡಿದ್ದಾರೆ. ಒಮ್ದು ವೇಳೆ ನಮ್ಮ ಹೋರಾಟ ಸಂವಿಧಾನ ವಿರೋಧಿಯೇ ಆಗಿದ್ದರೆ ಅವರ ವಿರುದ್ಧ ಕ್ರಮ ವಹಿಸಿ. ಸಚಿವರು, ಶಾಸಕರಿಂದ ರಾಜೀನಾಮೆ ಕೇಳಿ ಎಂದು ಆಗ್ರಹಿಸಿದರು.
ನಮ್ಮ ಹೋರಟ ಸಂವಿಧಾನ ವಿರೋಧಿಯಾಗಿದ್ದರೆ ಪ್ರತಿಭಟನೆಗೆ ಅನುಮತಿ ಯಾಕೆ ಕೊಟ್ಟಿದ್ದು? ಎಂದು ಪ್ರಶ್ನಿಸಿದ್ದಾರೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೀರಿ. ಆದರೆ ನಮ್ಮ ಸಮಾಜವನ್ನು ನಿಂದಿಸುವ ಮೂಲಕ ಬಸವಣ್ಣನವರಿಗೆ ಪರೋಕ್ಷವಾಗಿ ಅವಮಾನ ಮಾಡಿದ್ದೀರಿ. ಲಿಂಗಾಯಿತರ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನಮ್ಮದು ಸಂವಿಧಾನ ವಿರೋಧಿ ಹೋರಾಟ ಎಂದು ತಾವು ಕೊಟ್ಟ ಹೇಳಿಕೆಯನ್ನು ಸದನದ ಕಡತದಿಂದ ತೆಗೆದುಹಾಕಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ಹೇಳಿಕೆ ಖಂಡಿಸಿ ಡಿ.16ರಿಂದ ಅಧಿವೇಶನ ಮುಗಿಯುವರೆಗೆ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.