ಭಯೋತ್ಪಾದಕ ಸಂಘಟನೆಗಳನ್ನು ಸಾಕಿ ಬೆಳೆಸಿದ್ದು ತಾವೇ ಅನ್ನೋದನ್ನು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ. ಎರಡು ದಿನಗಳ ಹಿಂದಷ್ಟೇ ಪೇಶಾವರದಲ್ಲಿರೋ ಮಸೀದಿಯಲ್ಲಿ ಭದ್ರತಾ ಸಿಬ್ಬಂದಿ ಮೇಲೆಯೇ ಭಯೋತ್ಪಾದಕ ದಾಳಿ ನಡೆದಿತ್ತು. ಈ ಘಟನೆ ಬಳಿಕ ಅಲ್ಲಿನ ಆಂತರಿಕ ಸಚಿವರಿಗೆ ಜ್ಞಾನೋದಯವಾದಂತಿದೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಪಾಕ್ ಆಂತರಿಕ ಸಚಿವ ರಾಣಾ ಸನಾವುಲ್ಲಾ, ಮುಜಾಹಿದ್ದೀನ್ಗಳನ್ನು ಜಾಗತಿಕ ಶಕ್ತಿಯೊಂದಿಗೆ ಯುದ್ಧಕ್ಕೆ ಸಿದ್ಧಗೊಳಿಸುವುದು ಸಾಮೂಹಿಕ ತಪ್ಪು ಎಂದು ಒಪ್ಪಿಕೊಂಡಿದ್ದಾರೆ.
ಮುಜಾಹಿದ್ದೀನ್ ಸಂಘಟನೆಯನ್ನು ಬೆಳೆಸುವ ಅಗತ್ಯ ನಮಗಿರಲಿಲ್ಲ, ನಾವು ಮುಜಾಹಿದ್ದೀನ್ಗಳನ್ನು ಸೃಷ್ಟಿಸಿದೆವು, ನಂತರ ಅವರೇ ಭಯೋತ್ಪಾದಕರಾದರು ಎಂದು ಸಂಸತ್ತಿನ ಮೇಲ್ಮನೆಯನ್ನು ಉದ್ದೇಶಿಸಿ ಸನಾವುಲ್ಲಾ ಮಾತನಾಡಿದ್ರು. ಇದೇ ವೇಳೆ ರಕ್ಷಣಾ ಸಚಿವ ಖವಾಜಾ ಆಸಿಫ್ ಮಾತನಾಡಿ, ದೇಶದ ರಾಷ್ಟ್ರೀಯ ಭದ್ರತಾ ಸಮಿತಿಯು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ನಿರ್ಧರಿಸುತ್ತದೆ ಎಂದರು. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರ, ಮರಣದಂಡನೆ ಶಿಕ್ಷೆ ಅನುಭವಿಸುತ್ತಿರುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಸದಸ್ಯರನ್ನು ಬಿಡುಗಡೆ ಮಾಡಿದೆ ಎಂದು ಆಂತರಿಕ ಸಚಿವರು ಆರೋಪಿಸಿದ್ದಾರೆ.
ಜನವರಿ 30 ರಂದು ಪೇಶಾವರದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 220 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮಸೀದಿ ಮೇಲಿನ ಈ ದಾಳಿಯ ಹೊಣೆಯನ್ನು ನಿಷೇಧಿತ ಟಿಟಿಪಿ ಸಂಘಟನೆ ಹೊತ್ತುಕೊಂಡಿತ್ತು. ತೆಹ್ರೀಕ್-ಎ-ತಾಲಿಬಾನ್-ಎ-ಪಾಕಿಸ್ತಾನ್ ಎಂದು ಕರೆಯಲ್ಪಡುವ TTP, ಅಫ್ಘಾನ್-ಪಾಕಿಸ್ತಾನದ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಸ್ಲಾಮಿಸ್ಟ್ ಸಶಸ್ತ್ರ ಉಗ್ರಗಾಮಿ ಗುಂಪುಗಳ ಸಂಘಟನ ಎಂಬುದನ್ನು ಪಾಕಿಸ್ತಾನದ ಆಂತರಿಕ ಸಚಿವರು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಪ್ರಮುಖ ಸುಧಾರಣೆಗಳನ್ನು ತರುವ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.
ಪೇಶಾವರ ಮಸೀದಿ ಸ್ಫೋಟದ ನಂತರ, TTPಯ ಒಂದು ಬಣ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿತು. ಆದರೆ ಗಂಟೆಗಳ ನಂತರ TTP ವಕ್ತಾರ ಮಸೀದಿಗಳನ್ನು ಟಾರ್ಗೆಟ್ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಟಿಟಿಪಿ ಮತ್ತು ಪಾಕಿಸ್ತಾನ ಸರ್ಕಾರದ ನಡುವಿನ ಶಾಂತಿ ಒಪ್ಪಂದವನ್ನು ನಿಷೇಧಿತ ಗುಂಪು ರದ್ದುಗೊಳಿಸಿದ ನಂತರ ಪಾಕಿಸ್ತಾನದಾದ್ಯಂತ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿವೆ. 2007 ರಲ್ಲಿ ಟಿಟಿಪಿ ರಚನೆಯಾಗಿದೆ. ಅಮೆರಿಕ ಮತ್ತು NATO ವಿರುದ್ಧದ ಅಫ್ಘಾನ್ ತಾಲಿಬಾನ್ನ ಹೋರಾಟವನ್ನು TTP ಬೆಂಬಲಿಸಿದೆ.
TTP ಅಫ್ಘಾನ್ ತಾಲಿಬಾನ್ನಿಂದ ಪ್ರತ್ಯೇಕವಾಗಿದೆ ಎಂದು ಭಾವಿಸುವುದು ಸರಿಯಲ್ಲ, ತಾಲಿಬಾನ್ಗಳನ್ನು ಪುನರ್ವಸತಿ ಮಾಡುವ ಹಿಂದಿನ ನೀತಿಯು ಫಲ ನೀಡಲಾರದು. ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ಇದೇ ಕಾರಣವಾಯಿತು ಎಂದು ಸಚಿವ ಸನಾವುಲ್ಲಾ ಒಪ್ಪಿಕೊಂಡಿದ್ದಾರೆ. ಅಕ್ರಮ ಟಿಟಿಪಿ ಭಯೋತ್ಪಾದಕರು ನೆರೆಯ ದೇಶದಲ್ಲಿ ಸುರಕ್ಷಿತ ಆಶ್ರಯವನ್ನು ಕಂಡುಕೊಂಡಿದ್ದಾರೆ ಅನ್ನೋದು ಅವರ ಆರೋಪ. ಪ್ರಸ್ತುತ ಸರ್ಕಾರ ತಾಲಿಬಾನ್ ಬಗೆಗಿನ ತನ್ನ ಧೋರಣೆಯನ್ನು ಬದಲಾಯಿಸಿದೆ ಎಂದು ಪಾಕಿಸ್ತಾನದ ಫೆಡರಲ್ ಸಚಿವರು ಹೇಳಿದ್ದಾರೆ. ರಕ್ಷಣಾ ಸಚಿವ ಖವಾಜಾ ಆಸಿಫ್ ಮಾತನಾಡಿ, ಪಾಕಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಗೆ ಅಫ್ಘಾನ್ ನಿರಾಶ್ರಿತರನ್ನು ದೂಷಿಸಿದ್ದಾರೆ.