ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ವಾರಾಂತ್ಯದಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗಿದ್ದು, ಇದರ ವಿವರ ಇಂತಿದೆ.
ಜೋಗ ಜಲಪಾತ ಪ್ರವಾಸ: ಶುಕ್ರವಾರ ರಾತ್ರಿ 9:30ಕ್ಕೆ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಿಗ್ಗೆ 5ಕ್ಕೆ ಸಾಗರ ತಲುಪಲಿದ್ದು, ಅಲ್ಲಿ ವಿಶ್ರಾಂತಿ – ಉಪಹಾರದ ಬಳಿಕ ವರದಹಳ್ಳಿಗೆ, ವರದಾಮೂಲ ಇಕ್ಕೇರಿ, ಕೆಳದಿ ಸುತ್ತಾಡಿಕೊಂಡು ಮಧ್ಯಾಹ್ನ ಊಟಕ್ಕೆ ಸಾಗರ ತಲುಪಲಿದೆ.
ಊಟವಾದ ಬಳಿಕ ಜೋಗಕ್ಕೆ ತೆರಳಿ ಜಲಪಾತ ವೀಕ್ಷಣೆ ನಂತರ ಸಂಜೆ 7ಕ್ಕೆ ಮತ್ತೆ ಸಾಗರ ವಾಪಸ್ ಬಂದು ಶಾಪಿಂಗ್ – ಊಟ ಮುಗಿಸಿಕೊಂಡು ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಬೆಂಗಳೂರು ತಲುಪಲಿದೆ. ಮೊದಲ ಪ್ರವಾಸ ಆಗಸ್ಟ್ 11ರಿಂದ ಆರಂಭಗೊಳ್ಳಲಿದ್ದು, ವಯಸ್ಕರಿಗೆ 2,500 ರೂಪಾಯಿ ಹಾಗೂ ಮಕ್ಕಳಿಗೆ 2,300 ರೂಪಾಯಿ ಪ್ರಯಾಣದರ ನಿಗದಿ ಮಾಡಲಾಗಿದೆ.
ಗಗನಚುಕ್ಕಿ ಪ್ರವಾಸ: ಬೆಂಗಳೂರಿನಿಂದ ಬೆಳಿಗ್ಗೆ 6-30 ಕ್ಕೆ ಹೊರಟು ಮದ್ದೂರಿನಲ್ಲಿ ಉಪಹಾರ ಮುಗಿಸಿಕೊಂಡ ಬಳಿಕ ಸೋಮನಾಥಪುರ, ತಲಕಾಡು ತಲುಪಲಿದೆ. ತಲಕಾಡಿನಲ್ಲಿ ಊಟದ ವಿರಾಮ ಇರಲಿದ್ದು ನಂತರ ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ವೀಕ್ಷಿಸಿ ಸಂಜೆ 6-15ಕ್ಕೆ ಹೊರಟು ರಾತ್ರಿ 9ಕ್ಕೆ ಬೆಂಗಳೂರು ತಲುಪಲಿದೆ. ಊಟ – ಉಪಹಾರ ಹೊರತುಪಡಿಸಿ ವಯಸ್ಕರಿಗೆ 450 ರೂಪಾಯಿ ಹಾಗೂ ಮಕ್ಕಳಿಗೆ 300 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760990287 ಅಥವಾ 7760990988 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.