ನವದೆಹಲಿ: ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿಯ ಅಧಿಕೃತ ನಿವಾಸಕ್ಕೆ ಗುರುವಾರ ಅಪರಿಚಿತ ದುಷ್ಕರ್ಮಿಗಳು ನುಗ್ಗಿ ಕಪ್ಪು ಮಸಿ ಬಳಿದು ಹಾನಿಗೊಳಿಸಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್(ಎಐಎಂಐಎಂ) ನಾಯಕ ಓವೈಸಿ ಎಕ್ಸ್ ಪೋಸ್ಟ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ‘ಜೈ ಪ್ಯಾಲೆಸ್ತೀನ್’ ಘೋಷಣೆ ಕೂಗಿದ್ದಕ್ಕಾಗಿ ಎಐಎಂಐಎಂ ಸಂಸದರು ಕಳೆದ ಕೆಲವು ದಿನಗಳಿಂದ ವಿವಾದಕ್ಕೀಡಾಗಿದ್ದಾರೆ.
ತಮ್ಮ ನಿವಾಸವನ್ನು ಪದೇ ಪದೇ ಗುರಿಯಾಗಿಸಿಕೊಂಡು ಹತಾಶೆಯಿಂದ ದಾಳಿ ನಡೆಸಲಾಗಿದೆ ಎಂದು ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ‘ಅಪರಿಚಿತ ದುಷ್ಕರ್ಮಿಗಳು’ ಇಂದು ನನ್ನ ಮನೆಗೆ ಕಪ್ಪು ಮಸಿ ಬಳಿದು ಧ್ವಂಸಗೊಳಿಸಿದ್ದಾರೆ. ನನ್ನ ದೆಹಲಿ ನಿವಾಸದ ಮೇಲೆ ಎಷ್ಟು ಬಾರಿ ದಾಳಿ ನಡೆದಿದೆ ಎಂಬ ಲೆಕ್ಕಾಚಾರವೇ ನನಗೆ ಮರೆತಿದೆ. ಇದು ದೆಹಲಿ ಪೊಲೀಸ್ ಅಧಿಕಾರಿಗಳ ಮೂಗಿನ ನೇರಕ್ಕೆ ಹೇಗೆ ನಡೆಯುತ್ತಿದೆ ಎಂದು ನಾನು ಕೇಳಿದಾಗ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ, ಓಂ ಬಿರ್ಲಾ ಅವರೇ, ಸಂಸದರ ಸುರಕ್ಷತೆಗೆ ಭರವಸೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ ಎಂದು ಓವೈಸಿ ಹೇಳಿದ್ದಾರೆ.
ಈ ‘ಸಾವರ್ಕರ್ ಮಾದರಿಯ ಹೇಡಿತನದ ವರ್ತನೆ’ಗೆ ನಾನು ಹೆದರುವುದಿಲ್ಲ ಎಂದೂ ಓವೈಸಿ ಹೇಳಿದ್ದಾರೆ. ನನ್ನ ಮನೆಯನ್ನು ಗುರಿಯಾಗಿಸಿಕೊಳ್ಳುವ ಗೂಂಡಾಗಳಿಂದ ನನಗೆ ಹೆದರಿಕೆಯಿಲ್ಲ. ಈ ಸಾವರ್ಕರ್ ಮಾದರಿಯ ಹೇಡಿತನದ ನಡವಳಿಕೆಯನ್ನು ನಿಲ್ಲಿಸಿ ಮತ್ತು ನನ್ನನ್ನು ಎದುರಿಸುವಷ್ಟು ಪುರುಷರಾಗಿರಿ. ಸ್ವಲ್ಪ ಮಸಿ ಎರಚಿ, ಅಥವಾ ಕೆಲವು ಕಲ್ಲುಗಳನ್ನು ತೂರಿ ಓಡಿಹೋಗಬೇಡಿ ಎಂದು ಅವರು ಹೇಳಿದ್ದಾರೆ.