ಬೆಂಗಳೂರು: ಪರಿಸರ ಸಂರಕ್ಷಣೆ ಉದ್ದೇಶದಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 131 ಉದ್ದಿಮೆಗಳ ಸ್ಥಗಿತಕ್ಕೆ ಆದೇಶಿಸಿದೆ.
ಜಿಲ್ಲೆ, ತಾಲೂಕುಗಳಲ್ಲಿನ ಮಂಡಳಿಯ ಅಧಿಕಾರಿಗಳು ವಾಣಿಜ್ಯ ಉದ್ದಿಮೆಗಳ ಮೇಲೆ ನಿಗಾವಹಿಸಿ ನಿಯಮ ಉಲ್ಲಂಘಿಸಿದ ಉದ್ದಿಮೆಗಳನ್ನು ಮುಚ್ಚಲು ಆದೇಶಿಸಿದೆ. ಅದರಂತೆ 2023 -24ನೇ ಸಾಲಿನಲ್ಲಿ 131 ಉದ್ದಿಮೆಗಳ ಸ್ಥಗಿತಕ್ಕೆ ಹಾಗೂ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಳ್ಳುತ್ತಿದೆ. ಕಾಲ ಕಾಲಕ್ಕೆ ಉದ್ದಿಮೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ, ಸಾರ್ವಜನಿಕರಿಂದ ಬರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಉದ್ದಿಮೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಯಾವುದಾದರೂ ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ನೀರು, ಗಾಳಿ ಸೇರಿ ಪರಿಸರಕ್ಕೆ ಮಾರಕವಾಗುವಂತಹ ಅಂಶಗಳು ಕಂಡು ಬಂದಲ್ಲಿ ಉದ್ದಿಮೆಗಳಿಗೆ ದಂಡ ವಿಧಿಸುವ ಜೊತೆಗೆ ಅವುಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.