
ಎನ್‌ಪಿಎಸ್ ಬದಲಿಗೆ ಹಳೆ ಪಿಂಚಣಿ ವ್ಯವಸ್ಥೆ(ಒಪಿಎಸ್) ಮರು ಜಾರಿಗೊಳಿಸಬೇಕೆಂದು ಸರ್ಕಾರಿ ನೌಕರರ ಬೇಡಿಕೆ ಇಟ್ಟಿದ್ದು, ಈ ಕುರಿತಾಗಿ ಅಧ್ಯಯನ ನಡೆಸಲು ಕರ್ನಾಟಕದ ಅಧಿಕಾರಿಗಳ ತಂಡ ಮಾರ್ಚ್ 25ರಂದು ರಾಜಸ್ಥಾನಕ್ಕೆ ಭೇಟಿ ನೀಡಲಿದೆ.
ರಾಜಸ್ಥಾನ ಸರ್ಕಾರ 2022ರ ಏಪ್ರಿಲ್ ನಿಂದ ಒಪಿಎಸ್ ಮರು ಜಾರಿಗೊಳಿಸಿದೆ. ಹಲವು ರಾಜ್ಯಗಳಲ್ಲಿಯೂ ಒಪಿಎಸ್ ಮಾಡಲಾಗಿದ್ದು, ಕರ್ನಾಟಕದಲ್ಲಿಯೂ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ನೌಕರರು ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಮೂವರು ಅಧಿಕಾರಿಗಳ ತಂಡ ರಾಜಸ್ಥಾನಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲಿದೆ. ಉಳಿದ ರಾಜ್ಯಗಳಿಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಎರಡು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. 2006ರ ನಂತರ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಮರು ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.