ಬೆಂಗಳೂರು: ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಯನ್ನು ವರ್ಷಕ್ಕೆ ಮೂರು ಸಲ ನಡೆಸಲು ಮತ್ತು ಪರೀಕ್ಷೆಗೆ ಮೇಲ್ವಿಚಾರಕರಾಗಿ ಪ್ರೌಢಶಾಲೆ ಶಿಕ್ಷಕರ ಬದಲು ಪ್ರಾಥಮಿಕ ಶಾಲೆ ಶಿಕ್ಷಕರನ್ನು ನಿಯೋಜಿಸುವ ಆದೇಶ ಹಿಂಪಡೆಯಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನ ಪರಿಷತ್ ನಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಚಿದಾನಂದ ಗೌಡ, ವೈ.ಎ. ನಾರಾಯಣ ಸ್ವಾಮಿ, ಅ. ದೇವೇಗೌಡ, ಮರಿತಿಬ್ಬೇಗೌಡ ಅವರು ಸರ್ಕಾರದ ಆದೇಶದಿಂದ 1.50 ಲಕ್ಷ ಪ್ರೌಢಶಾಲಾ ಶಿಕ್ಷಕರಿಗೆ ಅಪಮಾನ ಮಾಡಿದಂತಾಗಿದ್ದು, ಅವರ ಆತ್ಮಸ್ಥೈರ್ಯ ಕುಗ್ಗಿಸುವಂತಿದೆ. ಮೊದಲಿನಂತೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಪ್ರೌಢಶಾಲೆ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳನ್ನು ವರ್ಷಕ್ಕೆ ಮೂರು ಸಲ ನಡೆಸುವುದು ಸರಿಯಾಗಿಲ್ಲ. ಇದರಿಂದ ಶಿಕ್ಷಕರು ಪರೀಕ್ಷೆ, ಮೌಲ್ಯಮಾಪನ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾಗುತ್ತದೆ. ಸರ್ಕಾರ ಈ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದ್ದು, ಇದು ಸಮರ್ಪಕವಾಗಿಲ್ಲ ಎಂದು ಅನೇಕ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.