ಜೂನ್ 12 ರಂದು ಪಾಟ್ನಾದಲ್ಲಿ ನಿಗದಿಯಾಗಿದ್ದ ಬಿಜೆಪಿಯೇತರ ಸಮಾನಮನಸ್ಕರ ಸಭೆ ಮುಂದೂಡಿಕೆಯಾಗಿದೆ. ವಿರೋಧಪಕ್ಷಗಳ ಬೃಹತ್ ಸಭೆಯು ಈಗ ಜೂನ್ 23 ರಂದು ನಡೆಯಲಿದೆ. ಕಾಂಗ್ರೆಸ್ ಮತ್ತು ತಮಿಳುನಾಡು ಮಿತ್ರಪಕ್ಷ ಡಿಎಂಕೆಯ ಮನವಿಯ ನಂತರ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ರಾಹುಲ್ ಗಾಂಧಿ ಗೈರುಹಾಜರಿಯ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಿರುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ಪ್ರಸ್ತುತ ಆರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಜೂನ್ 15 ರಂದು ಹಿಂದಿರುಗುವ ನಿರೀಕ್ಷೆಯಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟ್ನಾದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸದ ‘ಸಮಾನ ಮನಸ್ಸಿನ’ ರಾಜಕೀಯ ಪಕ್ಷಗಳ ಮಹತ್ವದ ಸಭೆ ಕರೆದಿದ್ದಾರೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಗ್ಗೂಡಿಸುವ ಪ್ರತಿಪಕ್ಷಗಳ ಪ್ರಯತ್ನದಲ್ಲಿ ಈ ಸಭೆ ದೊಡ್ಡ ಹೆಜ್ಜೆಯಾಗಿದೆ.