ಬೆಂಗಳೂರು: ಹೈಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(HSRP) ಕಡ್ಡಾಯವಾಗಿ ಅಳವಡಿಸುವ ಗಡುವನ್ನು ಸರ್ಕಾರ ಮತ್ತೆ ವಿಸ್ತರಿಸುತ್ತದೆಯೇ ಎನ್ನುವ ಚರ್ಚೆ ನಡೆದಿದೆ.
ರಾಜ್ಯದಲ್ಲಿ HSRP ಅಳವಡಿಸಿಕೊಳ್ಳಬೇಕಿರುವ ವಾಹನಗಳ ಸಂಖ್ಯೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. ರಾಜ್ಯ ಸರ್ಕಾರ ಮೇ 31ರವರೆಗೆ HSRP ಅಳವಡಿಕೆಗೆ ಗಡುವು ವಿಸ್ತರಿಸಿದೆ. ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು ಕೊನೆಯ ಹಂತದಲ್ಲಿ ಇನ್ನು ಲಕ್ಷಾಂತರ ವಾಹನಗಳು HSRP ಅಳವಡಿಸಿಕೊಳ್ಳಬೇಕಿದೆ.
ಸರ್ಕಾರಿ ವಾಹನಗಳಲ್ಲೇ ಕೆಲವು ಇನ್ನೂ ಅನೇಕ ವಾಹನಗಳು HSRP ಅಳವಡಿಸಿಕೊಂಡಿಲ್ಲ ಎನ್ನಲಾಗಿದ್ದು, ಮೇ 31ರೊಳಗೆ HSRPಗೆ ನೋಂದಾಯಿಸಿಕೊಳ್ಳದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಆರಂಭಿಕವಾಗಿ 500 ರೂಪಾಯಿ, ನಂತರದಲ್ಲಿ ಒಂದು ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.
ಏಪ್ರಿಲ್ 1, 2019ಕ್ಕೆ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಆಗಸ್ಟ್ 17, 2023ರಂದು ಸರ್ಕಾರ ಈ ಕುರಿತಾಗಿ ಆದೇಶ ಹೊರಡಿಸಿದ್ದು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಈ ಮೊದಲು ದ್ವಿಚಕ್ರ ವಾಹನ, ತಿಚಕ್ರ ವಾಹನ, ಕಾರ್, ಲಘು ಮತ್ತು ಭಾರಿ ವಾಣಿಜ್ಯ ವಾಹನ, ಟ್ರೇಲರ್, ಟ್ಯಾಕ್ಟರ್ ಗಳಿಗೆ ನವೆಂಬರ್ 17, 2023ರ ಗಡುವು ವಿಧಿಸಲಾಗಿತ್ತು.
ವಾಹನ ಮಾಲೀಕರು HSRP ಅಳವಡಿಕೆ ಬಗ್ಗೆ ಅಷ್ಟೇನು ಆಸಕ್ತಿ ತೋರಿಸಲಿಲ್ಲ. ಕೊನೆ ಹಂತದಲ್ಲಿ ನೋಂದಣಿಗೆ ಮುಂದಾಗಿದ್ದು, ಬಳಿಕ ಸರ್ಕಾರ ಗಡುವನ್ನು ಮತ್ತೆ ವಿಸ್ತರಿಸಿತ್ತು. ಇದೀಗ 2024ರ ಮೇ 31ರವರೆಗೆ ವಿಸ್ತರಿಸಲಾಗಿದೆ. ಇನ್ನೂ ಕೇವಲ 14 ದಿನಗಳಷ್ಟೇ ಬಾಕಿ ಇದ್ದು, ಅಷ್ಟರೊಳಗೆ ನೋಂದಾಯಿಸಿಕೊಳ್ಳದಿದ್ದರೆ ದಂಡ ಪಾವತಿಸಬೇಕಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ವಾಹನಗಳು HSRPಗೆ ನೋಂದಾಯಿಸಿಕೊಳ್ಳಬೇಕಿರುವುದರಿಂದ ಸರ್ಕಾರ ಗಡುವು ವಿಸ್ತರಿಸಬಹುದಾದ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.