ಹಲ್ಲು ನೋವು ಸಮಸ್ಯೆಯಿಂದ ಬಳಲದವರು ಯಾರೂ ಇರಲಿಕ್ಕಿಲ್ಲವೇನೋ…? ಹಲ್ಲು ನೋವು ನಿವಾರಿಸಲು ಮನೆ ಮದ್ದಿನ ಮೊರೆ ಹೋಗುತ್ತೇವೆ, ಈರುಳ್ಳಿಯಿಂದ ಹಲ್ಲು ನೋವನ್ನು ಕಡಿಮೆ ಮಾಡಬಹುದು. ಅದು ಹೇಗೆಂದು ನೋಡೋಣ.
ಮೊದಲಿಗೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಬಾಣಲೆಗೆ ಹಾಕಿ. ಸಣ್ಣ ಉರಿಯಲ್ಲಿಟ್ಟು ಎಣ್ಣೆ ಹಾಕಿ ಹುರಿಯಿರಿ. ಇದರಿಂದ ಬರುವ ಹಬೆಯನ್ನು ಬಾಯಿಯೊಳಗೆ ತೆಗೆದುಕೊಳ್ಳಿ. ಇದರಿಂದ ಹಲ್ಲಿನ ಹುಳುಕು, ಕುಳಿ ನೋವು ನಿಧಾನಕ್ಕೆ ಕಡಿಮೆಯಾಗುತ್ತದೆ.
ಆ ಬಳಿಕ ಉಗುರು ಬೆಚ್ಚಗಿನ ನೀರಿಗೆ ಇಂಗು ಹಾಗೂ ಉಪ್ಪಿನ ಪುಡಿಯನ್ನು ಹಾಕಿ ಕದಡಿ, ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲಿನಲ್ಲಿರುವ ಹುಳಗಳು ಅಂದರೆ ಬ್ಯಾಕ್ಟೀರಿಯಾಗಳು ಸಾಯುತ್ತವೆ.
ಕೊನೆಗೆ ಲವಂಗ ಪುಡಿಗೆ ತೆಂಗಿನೆಣ್ಣೆ ಬೆರೆಸಿ ಇವೆರಡನ್ನೂ ಪೇಸ್ಟ್ ರೂಪಕ್ಕೆ ತಂದು ಹಲ್ಲು ನೋವು ಇರುವ ಜಾಗಕ್ಕೆ ಹಚ್ಚಿ. ಬಾಯಲ್ಲಿ ನೀರು ಬಂದಾಗ ಮೊದಲ ಮೂರು ಬಾರಿ ಹೊರಗೆ ಉಗಿಯಿರಿ. ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸುವುದರಿಂದ ಹಲ್ಲು ನೋವು ಸಂಪೂರ್ಣ ಕಡಿಮೆಯಾಗುತ್ತದೆ.
ಈರುಳ್ಳಿಯಲ್ಲಿ ನಂಜು ನಿರೋಧಕ ಗುಣವಿದ್ದು ಇದು ಹೆಚ್ಚಿನ ಹಲ್ಲು ನೋವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ ನೀವು ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ರಾತ್ರಿ ಮಲಗುವ ಮುನ್ನ ಮರೆಯದೆ ಬ್ರಶ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.