ಒಡಿಸ್ಸಾದ ಬಿಜೆಪಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಜೈ ನಾರಾಯಣ್ ಮಿಶ್ರಾ, ಮಹಿಳಾ ಇನ್ಸ್ಪೆಕ್ಟರ್ ಒಬ್ಬರನ್ನು ಹಿಡಿದು ತಳ್ಳಿದ್ದಲ್ಲದೆ ನಿನಗೆ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ನಾಯಕನ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಬುಧವಾರದಂದು ಸಂಬಲ್ಪುರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಧನುಪಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಇನ್ ಚಾರ್ಜ್ ಅನಿತಾ ಪ್ರಧಾನ್ ಅವರೊಂದಿಗೆ ಮಾತಿನ ಚಕಮಕಿ ನಡೆಸುವ ಜೈ ನಾರಾಯಣ್ ಮಿಶ್ರಾ ಬಳಿಕ ಅವರನ್ನು ತಳ್ಳಿದ್ದಾರೆ. ಅಷ್ಟೇ ಅಲ್ಲ, ನಿನಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಜೈ ನಾರಾಯಣ್ ಮಿಶ್ರಾ, ನಾನು ಆಕೆಯನ್ನು ತಳ್ಳಿಲ್ಲ. ಪ್ರತಿಭಟನಾ ನಿರತ ಮಹಿಳೆಯರ ಜೊತೆ ಇನ್ಸ್ಪೆಕ್ಟರ್ ಅನುಚಿತವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದೆ. ಆಗ ಅವರೇ ನನ್ನನ್ನು ತಳ್ಳಿದ್ದಾರೆ ಎಂದು ತಿಳಿಸಿದ್ದಾರೆ.
ಇದರ ಮಧ್ಯೆ ವಿಡಿಯೋವನ್ನು ಶೇರ್ ಮಾಡಿರುವ ಬಿಜು ಜನತಾದಳದ ಮುಖಂಡ ಡಾ. ಅಮರ್ ಪಾಟ್ನಾಯಕ್, ವಿಪಕ್ಷ ನಾಯಕ ನಡೆದುಕೊಳ್ಳುವ ರೀತಿಯೇ ಇದು ಎಂದು ಪ್ರಶ್ನಿಸಿದ್ದಾರೆ. ಕರ್ತವ್ಯ ನಿರತ ಮಹಿಳಾ ಪೊಲೀಸ್ ಗೆ ಬೆದರಿಕೆ ಹಾಕಿರುವುದು ಎಷ್ಟು ಸರಿ ಎಂದಿರುವ ಅವರು, ತಮ್ಮ ಟ್ವೀಟನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಟ್ಯಾಗ್ ಮಾಡಿ ಇದು ಬಿಜೆಪಿಯ ಪ್ರತಿಬಿಂಬವೇ ಎಂದು ಕೇಳಿದ್ದಾರೆ.
https://twitter.com/sasmitpatra/status/1625870800774647808?ref_src=twsrc%5Etfw%7Ctwcamp%5Etweetembed%7Ctwterm%5E1625870800774647808%7Ctwgr%5E9bbfcac6d4e2b4e521ae9496761b84a12cfa036d%7Ctwcon%5Es1_&ref_url=https%3A%2F%2Fenglish.jagran.com%2Findia%2Fodisha-bjp-leader-seen-shoving-threatening-woman-police-officer-in-sambalpur-watch-10065338