ನವದೆಹಲಿ: ಸ್ಟಾರ್ ಪಿಸ್ತೂಲ್ ಶೂಟರ್ ಮನು ಭಾಕರ್ ಅವರು ಬುಧವಾರ ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಮನು ಭಾಕರ್ ಅವರು ಬುಧವಾರ ಬೆಳಿಗ್ಗೆ ದೆಹಲಿಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಗಿದೆ. ನಂತರ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಮನು ಭಾಕರ್ ಅವರನ್ನು ಅಭಿನಂದಿಸಿದ ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಸಾಧನೆ
ಮನು ಭಾಕರ್ ಅವರು ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಪದಕ ಪಟ್ಟಿಯನ್ನು ತೆರೆದರು. ಭಾರತಕ್ಕೆ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ, ಸರಬ್ಜೋತ್ ಸಿಂಗ್ ಮತ್ತು ಭಾಕರ್ ಅವರು 10 ಮೀಟರ್ ಏರ್ ಪಿಸ್ತೂಲ್(ಮಿಶ್ರ ತಂಡ) ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದರು. ಇದು ಭಾರತದ ಮೊದಲ ಶೂಟಿಂಗ್ ತಂಡ ಪದಕವಾಗಿದೆ.