ತನ್ನ ಪ್ರಿಯಕರ ಬೇರೊಬ್ಬಳನ್ನು ಮದುವೆಯಾದ ಸಿಟ್ಟಿನಲ್ಲಿ ಆತನನ್ನು ಕೊಲ್ಲುವ ಯತ್ನದಲ್ಲಿ ನರ್ಸ್ ಒಬ್ಬರು ಆತನ ಮೇಲೆ ಬಿಸಿ ನೀರು ಚೆಲ್ಲಿ ತೀವ್ರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.
ಸಂತ್ರಸ್ತ ವಿಜಯ್ ಶಂಕರ್, ಬೊಮ್ಮಸಂದ್ರದ ಯಾರದನಹಳ್ಳಿ ನಿವಾಸಿಯಾಗಿದ್ದಾರೆ. ತೀವ್ರವಾದ ಸುಟ್ಟ ಗಾಯಗಳಿಂದಾಗಿ ಆತ ಈಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುವ ಜ್ಯೋತಿ ದೊಡ್ಡಮನಿ ಕಲಬುರಗಿ ಜಿಲ್ಲೆಯ ಅಫಜ಼ಲಪುರದವರಾಗಿದ್ದು, ಚಾಮರಾಜಪೇಟೆಯಲ್ಲಿ ವಾಸಿಸುತ್ತಿದ್ದಾರೆ. ಇದೇ ಪ್ರದೇಶದ ಬಟ್ಟೆ ಕಂಪನಿಯೊಂದರಲ್ಲಿ ಫೊಟೋ ಎಡಿಟರ್ ಆಗಿ ವಿಜಯ್ ಕೆಲಸ ಮಾಡುತ್ತಿದ್ದಾರೆ.
ಒಂದೇ ಊರಿನವರಾದ ಕಾರಣ ಇಬ್ಬರೂ ಒಬ್ಬರಿಗೊಬ್ಬರು ಕಳೆದ ಐದು ವರ್ಷಗಳಿಂದ ಪರಿಚಿತರಾಗಿದ್ದಾರೆ ಎಂದು ವಿಜಯ್ ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿದ್ದು, ಈ ವೇಳೆ ಜ್ಯೋತಿ ತನ್ನ ವೈವಾಹಿಕ ಸ್ಥಾನಮಾನದ ಕುರಿತು ವಿಜಯ್‌ಗೆ ಏನೂ ತಿಳಿಸಿಲ್ಲ.
ಜ್ಯೋತಿಗೆ ಮದುವೆಯಾಗಿದೆ ಎಂದು ಕಂಡುಕೊಂಡ ವಿಜಯ್ ಎರಡು ವರ್ಷಗಳಿಂದ ಆಕೆಯಿಂದ ದೂರವುಳಿದಿದ್ದಾರೆ. ಆದರೆ ತನ್ನೊಂದಿಗಿನ ಸಲ್ಲಾಪ ಮುಂದುವರೆಸಿ, ತನ್ನನ್ನೇ ಮದುವೆಯಾಗುವಂತೆ ವಿಜಯ್‌ಗೆ ದಂಬಾಲು ಬಿದ್ದಿದ್ದಾಳೆ ಜ್ಯೋತಿ. ಜ್ಯೋತಿ ಸಿಂಗಲ್ ಎಂದು ಭಾವಿಸಿ ಆಕೆಯೊಂದಿಗೆ ಪ್ರಾಮಾಣಿಕವಾದ ಸಂಬಂಧ ಇಟ್ಟುಕೊಂಡಿದ್ದಾಗಿ ವಿಜಯ್ ದೂರಿನಲ್ಲಿ ಹೇಳಿಕೊಂಡಿದ್ದಾರೆ. ವಿಷಯ ತಿಳಿದ ಬಳಿಕ ಆಕೆಯಿಂದ ದೂರ ಉಳಿದಿದ್ದಾರೆ ವಿಜಯ್.
ಮೇ 11ರಂದು ಬೇರೊಬ್ಬಾಕೆಯನ್ನು ಮದುವೆಯಾದ ವಿಜಯ್ ಮೇ 23ರಂದು ನಗರಕ್ಕೆ ಮರಳಿದ್ದಾರೆ. ಮೇ 25ರಂದು ವಿಜಯ್‌ಗೆ ಕರೆ ಮಾಡಿದ ಜ್ಯೋತಿ ತನ್ನ ಹುಟ್ಟುಹಬ್ಬದ ತಯಾರಿಯ ಕುರಿತು ಆತನೊಂದಿಗೆ ಮಾತನಾಡಿದ್ದಾಳೆ. ತನಗೆ ಮದುವೆಯಾಗಿರುವ ಕಾರಣ ತಮ್ಮಿಬ್ಬರ ನಡುವಿನ ಈ ಸಂಬಂಧ ಮುಂದುವರಿಸುವುದು ಸೂಕ್ತವಲ್ಲ ಎಂದು ಆಕೆಗೆ ತಿಳಿಸಿದ್ದಾನೆ.
ಮೇ 25ರ ರಾತ್ರಿ ಆಕೆಯ ಹುಟ್ಟುಹಬ್ಬ ಮುಗಿದ ಬಳಿಕ, ತನಗೆ ಲವಣಾಂಶದ ಡೋಸ್ ಕೊಡುವಂತೆ ವಿಜಯ್ ಕೋರಿದ್ದಾನೆ. ಅದೇ ದಿನ ಬೆಳಗಿನ ಜಾವ 4 ಗಂಟೆಯ ವೇಳೆಗೆ ವಿಜಯ್ ಆಳವಾದ ನಿದ್ರೆಗೆ ಜಾರಿದ್ದ ಸಂದರ್ಭದಲ್ಲಿ ಜ್ಯೋತಿ ಆತನ ಮೇಲೆ ಕುದಿಯುವ ನೀರು ಚೆಲ್ಲಿದ್ದಾಳೆ. ಇದರಿಂದ ಗಾಬರಿಗೊಂಡ ವಿಜಯ್ ಅಲ್ಲಿಯೇ ಇದ್ದ ಸಿಲಿಂಡರ್‌ಗೆ ತಲೆ ಒಡೆದುಕೊಂಡಿದ್ದಾರೆ. ಕೂಡಲೇ ಬಿಯರ್ ಬಾಟಲಿ ತೆಗೆದುಕೊಂಡ ಜ್ಯೋತಿ ವಿಜಯ್‌ಗೆ ಅದರಲ್ಲಿ ಬಡಿದು, ಕೋಣೆಯ ಬೀಗ ಜಡಿದು ಅಲ್ಲಿಂದ ಪರಾರಿಯಾಗಿದ್ದಾಳೆ.
ನೋವಿನಿಂದ ಜೋರಾಗಿ ಕೂಗಿಕೊಂಡ ವಿಜಯ್‌ನ ಅಳಲನ್ನು ಆತನ ಮನೆಯ ಮಾಲೀಕರು ಕೇಳಿಸಿಕೊಂಡು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಜಯ್ ಮುಖ, ಎದೆ, ಹಾಗೂ ದೇಹದ ಇತರ ಭಾಗಗಳಿಗೆ 50%ನಷ್ಟು ಸುಟ್ಟ ಗಾಯಗಳಾಗಿವೆ. ಜ್ಯೋತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯ ಪತ್ತೆಗೆ ಜಾಲ ಬೀಸಿದ್ದಾರೆ.