ಬೆಳಗಾವಿ: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ 11,700 ನೌಕರರು ಎನ್.ಪಿ.ಎಸ್.ನಿಂದ ಒಪಿಎಸ್ ಗೆ ವರ್ಗಾವಣೆಯಾಗುತ್ತಿದ್ದು ಉಳಿದ ನೌಕರರಲ್ಲಿಯೂ ಭರವಸೆ ಮೂಡಿಸಿದೆ.
2004ರ ಜನವರಿ 1ಕ್ಕಿಂತ ಮೊದಲು ನೇಮಕವಾದ ನೌಕರರನ್ನು ಎನ್‌ಪಿಎಸ್ ನಿಂದ ಕೈಬಿಟ್ಟು ಒಪಿಎಸ್ ಗೆ ಸೇರ್ಪಡೆ ಮಾಡಲಾಗುವುದು. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯದಲ್ಲಿಯೂ ಈ ಆದೇಶ ಜಾರಿಗೆ ಬರಲಿದೆ.
ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ತೇಜ ಇದನ್ನು ಸ್ವಾಗತಿಸಿದ್ದಾರೆ. ಹೋರಾಟದ ಫಲವಾಗಿ ಎನ್.ಪಿ.ಎಸ್. ನೌಕರರು ತಮ್ಮ ಗುರಿ ತಲುಪುವ ದಿನಗಳು ಸಮೀಪಿಸುತ್ತಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ, ಶ್ರಮ ಹಾಕಲು ಸಂಘ ಸಿದ್ಧವಿದೆ ಎಂದು ಹೇಳಿದ್ದಾರೆ.
ಎನ್‌ಪಿಎಸ್ ರದ್ದು ಮಾಡುವ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 23ರಂದು ಅಧಿಕಾರಿಗಳು ಮತ್ತು ಸಂಘದ ಪ್ರತಿನಿಧಿಗಳ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.