
ವಿಜಯಪುರ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನೋಟಿಸ್ ನನಗೆ ಬಂದಿಲ್ಲ. ಸುಮ್ಮನೆ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ನನಗೆ ನೋಟಿಸ್ ಕೊಡುವಂತಹ ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ. ಭ್ರಷ್ಟರು ರಾಜಕೀಯ ಮುಂದುವರೆಸುವವರ ಬಗ್ಗೆ ನಾನು ಮಾತನಾಡಿದ್ದೇನೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ಇನ್ನು ಯಾಕೆ ನೋಟಿಸ್ ನೀಡಿಲ್ಲ ಎಂದು ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೋಹ ಹರಡಿಸುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.