ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆದಿದ್ದು ಜೂನ್ 6 ರಂದು ಮತ ಎಣಿಕೆ ಕಾರ್ಯ ಪೂರ್ಣಗೊಂಡಿತ್ತು. ನರೇಂದ್ರ ಮೋದಿ ನೇತೃತ್ವದ NDA ಮೈತ್ರಿಕೂಟ ಬಹುಮತ ಗಳಿಸಿದ್ದು ಪ್ರಧಾನಮಂತ್ರಿಯಾಗಿ ಮೂರನೇ ಅವಧಿಗೆ ನರೇಂದ್ರ ಮೋದಿಯವರು ಭಾನುವಾರದಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದರ ಮಧ್ಯೆ ಕರ್ನಾಟಕದ ಮತ ಗಳಿಕೆ ಕುರಿತಂತೆ ಇಂಟರೆಸ್ಟಿಂಗ್ ಮಾಹಿತಿ ಬಹಿರಂಗವಾಗಿದ್ದು, ರಾಜ್ಯದ 9 ಕ್ಷೇತ್ರಗಳಲ್ಲಿ NOTA (NONE OF THE ABOVE) ಮೂರನೇ ಸ್ಥಾನದಲ್ಲಿದೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ತಮಗೆ ಇಷ್ಟವಾಗದಿದ್ದ ಪಕ್ಷದಲ್ಲಿ ಅಂತಹ ವೇಳೆ ‘ನೋಟಾ’ ಆಯ್ಕೆ ಮಾಡಿಕೊಳ್ಳುವ ಅವಕಾಶ ಮತದಾರರಿಗಿದ್ದು, ಇದನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2013ರಲ್ಲಿ ಜಾರಿಗೆ ತರಲಾಗಿತ್ತು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಉಡುಪಿ – ಚಿಕ್ಕಮಗಳೂರು, ಬಳ್ಳಾರಿ, ದಕ್ಷಿಣ ಕನ್ನಡ, ಹಾವೇರಿ ಹಾಗೂ ರಾಯಚೂರು ಲೋಕಸಭಾ ಕ್ಷೇತ್ರಗಳಲ್ಲಿ ‘ನೋಟಾ’ ಮತ ಗಳಿಕೆ ಮೂರನೇ ಸ್ಥಾನದಲ್ಲಿದೆ. ಇನ್ನುಳಿದಂತೆ ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಚಿಕ್ಕಬಳ್ಳಾಪುರ, ಧಾರವಾಡ, ಕಲಬುರಗಿ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ‘ನೋಟಾ’ ಮತ ಗಳಿಕೆ ನಾಲ್ಕನೇ ಸ್ಥಾನದಲ್ಲಿದೆ. ಬಾಗಲಕೋಟೆ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ‘ನೋಟಾ’ ಮತ ಗಳಿಕೆ 5ನೇ ಸ್ಥಾನಕ್ಕಿಂತ ಕಡಿಮೆ ಇದೆ.