ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಭಾರತೀಯ ಸಿನಿರಂಗದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ ಚಿತ್ರ. ಈ ಚಿತ್ರದಲ್ಲಿರುವ ಪ್ರತಿ ಪಾತ್ರಗಳು ಸಿನಿರಸಿಕರ ಮೆಚ್ಚುಗೆ ಗಳಿಸಿವೆ. ಬಲ್ಲಾಳದೇವನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಣಾ ದಗ್ಗುಬಾಟಿ ಅಭಿನಯ ಪ್ರಭಾಸ್ ಅಭಿನಯದಷ್ಟೇ ಮೆಚ್ಚುಗೆ ಗಳಿಸಿದೆ. ಆದರೆ ಚಿತ್ರ ಪ್ರಾರಂಭವಾಗುವ ಮುನ್ನ ಬಲ್ಲಾಳದೇವನ ಪಾತ್ರಕ್ಕೆ ರಾಣಾ ದಗ್ಗುಬಾಟಿ ಮೊದಲ ಆಯ್ಕೆ ಆಗಿರಲಿಲ್ಲ ಎಂಬುದನ್ನ ದಗ್ಗುಬಾಟಿಯೇ ತಿಳಿಸಿದ್ದಾರೆ.
ನೆಟ್‌ಫ್ಲಿಕ್ಸ್ ನಲ್ಲಿನ ಇತ್ತೀಚಿನ ಸಾಕ್ಷ್ಯಚಿತ್ರ ಕಾರ್ಯಕ್ರಮ ‘ಮಾರ್ಡನ್ ಮಾಸ್ಟರ್ಸ್’ ನಲ್ಲಿ ರಾಣಾ ದಗ್ಗುಬಾಟಿ ಈ ಬಗ್ಗೆ ತಿಳಿಸಿದ್ದಾರೆ.
ಎಸ್ ಎಸ್ ರಾಜಮೌಳಿ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ತೆರೆದಿಟ್ಟ ಅವರು ಚಿತ್ರದ ನಿರ್ಮಾಪಕರೊಂದಿಗೆ ತಾವು ನಡೆಸಿದ್ದ ಸಂಭಾಷಣೆಯನ್ನು ಬಹಿರಂಗಪಡಿಸಿದರು. “ನಿರ್ಮಾಪಕ ಶೋಬು ಯರ್ಲಗಡ್ಡ ಬಂದು ಇದು ಯುದ್ಧ ಆಧಾರಿತ ಚಿತ್ರ ಎಂದು ಹೇಳಿದರು. ನಾನು ಚಿತ್ರದ ಕಥೆಯನ್ನು ಒಪ್ಪಿಕೊಂಡೆ. ಈ ವೇಳೆ ಅವರು ನನ್ನನ್ನು ಬಲ್ಲಾಳದೇವನ ಪಾತ್ರಕ್ಕೆ ಆಯ್ಕೆ ಮಾಡುವ ಮುನ್ನ ಬೇರೆ ನಟರನ್ನು ಸಂಪರ್ಕಿಸಿದ್ದಾಗಿ ತಿಳಿಯಿತು. ಆಗ ನಾನು ನನಗಿಂತ ಮುಂಚೆ ನಿಮ್ಮ ಆಲೋಟನೆಯಲ್ಲಿದ್ದ ಆ ನಟ ಯಾರು ಎಂದು ಪ್ರಶ್ನಿಸಿದಾಗ ಹಾಲಿವುಡ್ ನಟ ಜೇಸನ್ ಮೊಮೊವಾ ಎಂದು ತಿಳಿಯಿತು” ಎಂದಿದ್ದಾರೆ.
ಇದನ್ನು ಕೇಳಿದ ನಂತರ ತನಗೆ ಉಂಟಾದ ಆಶ್ಚರ್ಯವನ್ನು ವ್ಯಕ್ತಪಡಿಸಿದ ರಾಣಾ, ಅಂತಹ ಖ್ಯಾತ ತಾರೆಯ ನಂತರ ನಾನು ಪಾತ್ರಕ್ಕೆ ಎರಡನೇ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷಪಟ್ಟಿದ್ದೇನೆ ಎಂದು ಹೇಳಿದರು.
ರಾಣಾ ದಗ್ಗುಬಾಟಿ ಅವರು ತಮಿಳು ಚಲನಚಿತ್ರ 1945 ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಅದರ ನಂತರ ಅವರು ತೆಲುಗು ಚಿತ್ರ ಸ್ಪೈನಲ್ಲಿ ಗಮನಾರ್ಹ ಅತಿಥಿ ಪಾತ್ರವನ್ನು ಮಾಡಿದರು. ಸದ್ಯ ರಜನಿಕಾಂತ್ ಅವರ ನೇತೃತ್ವದ ವೆಟ್ಟೈಯಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.