ಬಿಹಾರದ ಬಂಧಿತ ಯೂಟ್ಯೂಬರ್ ನನ್ನು ಬಿಡುಗಡೆ ಮಾಡಬೇಕು ಮತ್ತು ಆತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ದಾಖಲಿಸಿರುವ ಕೇಸನ್ನು ವಜಾ ಮಾಡಬೇಕೆಂದು ಆಗ್ರಹಿಸಿ ವ್ಯಕ್ತಿಯೊಬ್ಬರು ವಿದ್ಯುತ್ ಟವರ್ ಹತ್ತಿ ಕುಳಿತು ಪ್ರತಿಭಟಿಸಿದ್ದಾರೆ. ಆತನನ್ನು ಕೆಳಗಿಳಿಸಲು ಬಿಹಾರ ಪೊಲೀಸರು ಸತತ ಮೂರು ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಬೇಕಾಯಿತು.
ಇತ್ತೀಚೆಗೆ ಬಿಹಾರದ ವಲಸೆ ಕಾರ್ಮಿಕರ ವಿರುದ್ಧ ಹಿಂಸಾಚಾರವನ್ನು ಆರೋಪಿಸಿ ತಮಿಳುನಾಡಿನಲ್ಲಿ ಬಿಹಾರ ವಲಸೆ ಕಾರ್ಮಿಕರನ್ನು ಥಳಿಸುತ್ತಿರುವಂತೆ ಬಿಂಬಿಸಿದ ತಪ್ಪಾದ ವಿಡಿಯೋವನ್ನ ಯೂಟ್ಯೂಬರ್ ಮನೀಶ್ ಕಶ್ಯಪ್ ಹಂಚಿಕೊಂಡಿದ್ದರು. ಇದು ತ್ವರಿತವಾಗಿ ವೈರಲ್ ಆಗಿ ಎರಡೂ ರಾಜ್ಯಗಳ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಯೂಟ್ಯೂಬರ್‌ನನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಯೂಟ್ಯೂಬರ್ ಮನೀಶ್ ಕಶ್ಯಪ್ ಬಿಡುಗಡೆಗೆ ಒತ್ತಾಯಿಸಿ ಮತ್ತು ಅವರ ವಿರುದ್ಧದ ಎನ್‌ಎಸ್‌ಎ ತೆಗೆದುಹಾಕುವಂತೆ ಬಿಹಾರದ ವ್ಯಕ್ತಿಯೊಬ್ಬರು ಸೆಕ್ಟರ್ 128 ರಲ್ಲಿ ಜೇಪೀ ಫ್ಲೈಓವರ್ ಬಳಿ ವಿದ್ಯುತ್ ಟವರ್ ಹತ್ತಿ ಕುಳಿತರು. ಅವರನ್ನು ಸುರಕ್ಷಿತವಾಗಿ ಕೆಳಗಿಳಿಸುವ ಮೊದಲು ಪೊಲೀಸರು ವಿದ್ಯುತ್ ಅನ್ನು ಸ್ಥಗಿತಗೊಳಿಸಬೇಕಾಯಿತು. ಆರಂಭದಲ್ಲಿ ವ್ಯಕ್ತಿ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯ ಮಾತಿಗೆ ಬಗ್ಗದೇ ಟವರ್ ಮೇಲೆ ಕುಳಿತರು.
ಪೊಲೀಸರು ಅಂತಿಮವಾಗಿ ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ವ್ಯಕ್ತಿಯನ್ನು ತಲುಪಿ ಕೆಳಕ್ಕೆ ಇಳಿಸಿದರು. ಪೊಲೀಸರ ಪ್ರಕಾರ ಟವರ್ ಏರಿ ಕುಳಿತ ವ್ಯಕ್ತಿ ಮನೀಶ್ ಕಶ್ಯಪ್‌ನ ದೊಡ್ಡ ಅಭಿಮಾನಿಯೆನ್ನಲಾಗಿದೆ.