ಬೆಂಗಳೂರು: 50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆ ರದ್ದುಪಡಿಸಿದ ಕೆಎಟಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ಇದ್ದರೂ 55 ವರ್ಷ ಮತ್ತು 58 ವರ್ಷದ ಇಬ್ಬರು ಶಿಕ್ಷಕಿಯರನ್ನು ಸರ್ಕಾರ ವರ್ಗಾವಣೆ ಮಾಡಿದ್ದ ಕ್ರಮ ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ(ಕೆಎಟಿ) ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬೂದಿಹಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮಾದೇವಿ ಹುಂಡೇಕರ(55) ತೆಗ್ಗಿ ಗ್ರಾಮದ ಪ್ರಭಾವತಿ ರೋಣದ(58) ಅವರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಇಬ್ಬರು ಶಿಕ್ಷಕಿಯರು ಕೆಎಟಿ ಮೊರೆ ಹೋಗಿದ್ದರು. ವರ್ಗಾವಣೆ ಆದೇಶವನ್ನು ಕೆಎಟಿ ರದ್ದುಪಡಿಸಿದ್ದು, ಕೆಇಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್.ವಿ. ಆಂಜಾರಿಯಾ ನೇತೃತ್ವದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
50 ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ಕರ್ನಾಟಕ ರಾಜ್ಯ ನಾಗರೀಕ ಸೇವಾ(ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ) 2020 ಸೆಕ್ಷನ್ 10(1)(6) ಅನ್ವಯ ಅವರ ವರ್ಗಾವಣೆಗೆ ವಿನಾಯಿತಿ ಇದೆ. ಹೆಚ್ಚುವರಿ ಶಿಕ್ಷಕರೆಂದು ಘೋಷಿಸಿ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲವೆಂದು ನ್ಯಾಯಪೀಠ ತಿಳಿಸಿದೆ.