ಬೆಂಗಳೂರು: ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಕೆ ಗಡುವು ನಾಳೆಗೆ ಮುಕ್ತಾಯವಾದರೂ ವಾಹನ ಚಾಲಕರ ವಿರುದ್ಧ ಇನ್ನೂ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 18 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಸಂಬಂಧಿಸಿದ ವಿಷಯದ ವಿಚಾರಣೆಯ ನಂತರ ಹೆಚ್‌ಎಸ್‌ಆರ್‌ಪಿ(ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು) ಅಳವಡಿಕೆಯ ಗಡುವನ್ನು ವಿಸ್ತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆ ಶುಕ್ರವಾರ ತಿಳಿಸಿದೆ.
ಹೆಚ್‌ಎಸ್‌ಆರ್‌ಪಿ ಜೋಡಣೆಯ ಗಡುವು ಸೆಪ್ಟೆಂಬರ್ 15 ರಂದು ಕೊನೆಗೊಳ್ಳಲಿದೆ. ಸಾರಿಗೆ ಅಧಿಕಾರಿಗಳು ಸೆಪ್ಟೆಂಬರ್ 16 ರಿಂದ ಹೆಚ್‌ಎಸ್‌ಆರ್‌ಪಿ ಇಲ್ಲದ ವಾಹನ ಚಾಲಕರಿಗೆ 500 ರೂ. ಮತ್ತು ಪುನರಾವರ್ತಿತ ಅಪರಾಧಿಗಳಿಗೆ 1,000 ರೂ. ದಂಡ ವಿಧಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿತ್ತು.
ಸಾರಿಗೆ ಇಲಾಖೆಯು ಹೆಚ್.ಎಸ್.ಆರ್.ಪಿ. ಅಳವಡಿಸದ ವಾಹನ ಚಾಲಕರಿಗೆ ಸದ್ಯ ದಂಡ ವಿಧಿಸಲು ನಿರ್ಧರಿಸಿಲ್ಲ ಅಥವಾ ಹೆಚ್‌ಎಸ್‌ಆರ್‌ಪಿ ಪಡೆಯಲು ಹೆಚ್ಚಿನ ಸಮಯವನ್ನು ನೀಡುವುದಿಲ್ಲ ಎಂದು ನಿರ್ಧರಿಸಿದೆ.
ಸಾರಿಗೆ ಇಲಾಖೆ ಪ್ರಕಾರ ರಾಜ್ಯದಲ್ಲಿ ಎರಡು ಕೋಟಿ ವಾಹನಗಳ ಪೈಕಿ ಶೇ.26ರಷ್ಟು ವಾಹನಗಳಿಗೆ ಮಾತ್ರ HSRP ಅಳವಡಿಸಲಾಗಿದೆ. ನೀರಸ ಪ್ರತಿಕ್ರಿಯೆಯ ದೃಷ್ಟಿಯಿಂದ HSRP ಜೋಡಣೆಯ ಗಡುವನ್ನು ಹಿಂದೆ ಹಲವಾರು ಬಾರಿ ವಿಸ್ತರಿಸಲಾಗಿತ್ತು.
ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಅಥವಾ ವಾಹನ ಚಾಲಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಸೆಪ್ಟೆಂಬರ್ 18 ನ್ಯಾಯಾಲಯದ ವಿಚಾರಣೆಯ ನಂತರವೇ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ವಾಹನ ಚಾಲಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಕರ್ನಾಟಕ ಸಾರಿಗೆ ಆಯುಕ್ತ ಯೋಗೇಶ್ ಎ.ಎಂ. ಅವರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
HSRP ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಪ್ರಮುಖ ಯೋಜನೆಯಾಗಿದ್ದು, ಇದು ಅಲ್ಯೂಮಿನಿಯಂ-ನಿರ್ಮಿತ ನಂಬರ್ ಪ್ಲೇಟ್ ಆಗಿದ್ದು, ವಾಹನದ ಮೇಲೆ ಕನಿಷ್ಠ ಎರಡು ಮರುಬಳಕೆ ಮಾಡಲಾಗದ ಸ್ನ್ಯಾಪ್-ಆನ್ ಲಾಕ್‌ಗಳಿಂದ ಸ್ಥಿರವಾಗಿದೆ. ವಿವಿಧ ಗುರುತಿಸಬಹುದಾದ ವೈಶಿಷ್ಟ್ಯಗಳನ್ನು ಹೊಂದಿದೆ. 2019 ರ ಮೊದಲು ನೋಂದಾಯಿಸಿದ ವಾಹನಗಳಲ್ಲಿ ಅವುಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.