ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದರಲ್ಲಿಯೂ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾ ನಗರಳಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿದೆ. ರಸ್ತೆಗಳಲ್ಲಿ ಲೈಟಿಂಗ್ಸ್ ಅಳವಡಿಸಲಾಗಿದ್ದು, ಪೊಲೀಸ್ ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ವರ್ಷಾಚರಣೆ ಸಂಭ್ರಮದಲ್ಲಿ ನಶೆ ಏರಿಸಿಕೊಂಡು ತೂರಾಡುವವರಿಗಾಗಿ ಹಾಗೂ ಮಹಿಳೆಯರು, ವೃದ್ಧರ ಸುರಕ್ಷತೆಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ. ಮತ್ತೇರಿಸಿಕೊಂಡು ನಿಯಂತ್ರಣ ತಪ್ಪಿದರೆ ಮಹಿಳೆಯರು, ವೃದ್ಧರಿಗಾಗಿ ಐ ಲ್ಯಾಂಡ್ ಗಳನ್ನು ನಿರ್ಮಿಸಲಾಗಿದೆ.
ನಶೆಯಲ್ಲಿ ತೂರಾಡಿ, ಎಚ್ಚರ ತಪ್ಪಿದರೆ ಅಂತವರನ್ನು ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಲು ತಾತ್ಕಾಲಿಕ ಫುಟ್ ಪಾತ್ ಟೆಂಟ್ ಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಪ್ರತ್ಯೇಕವಾದ ಬೆಡ್, ದಿಂಬುಗಳುಳ್ಳ ವಿಶ್ರಾಂತಿ ಕೊಠಡಿಗಳನ್ನು ಕೂಡ ನಿರ್ಮಿಸಲಾಗಿದೆ.
ಐ ಲ್ಯಾಂಡ್ ಒಳಗೆ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ. ಅಸ್ವಸ್ಥಗೊಂಡವರಿಗೆ ಕರೆದೊಯ್ಯಲು ಆಂಬುಲೆನ್ಸ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಇನ್ನು ಬೆಂಗಳೂರು ನಗರದಾದ್ಯಂತ ಪೊಲೀಸ್ ಕಣ್ಗಾವಲು ಹಾಕಲಾಗಿದ್ದು, ಫ್ಲೈ ಓವರ್ ಗಳು ಸಂಜೆಯಿಂದಲೇ ಸಂಪೂರ್ಣ ಬಂದ್ ಆಗಲಿವೆ.