ಬೆಂಗಳೂರು : ಆಗಸ್ಟ್ 1ರ ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಆಟೋ, ಬೈಕ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೌದು, ಆಗಸ್ಟ್ 1 ರಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ದ್ವಿಚಕ್ರ ವಾಹನಗಳು, ಆಟೋಗಳು, ಟ್ರಾಕ್ಟರುಗಳು, ಮೋಟಾರು ರಹಿತ ವಾಹನಗಳು, ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಮತ್ತು ಕ್ವಾಡ್ರಿ ಸೈಕಲ್ ಗಳ ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ನಿಷೇಧಿಸಿದೆ.
ಎಕ್ಸ್ ಪ್ರೆಸ್ ವೇಯಲ್ಲಿ ವರದಿಯಾದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ವರ್ಷದ ಮಾರ್ಚ್ ನಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಓಪನ್ ಆಗಿದ್ದು, ಹಲವಾರು ಅಪಘಾತಗಳು ವರದಿಯಾದ ನಂತರ ಸುರಕ್ಷತಾ ತಪಾಸಣೆ ನಡೆಸಲು ಸರ್ಕಾರಿ ಸ್ವಾಮ್ಯದ ಎನ್ಎಚ್ಎಐ ರಸ್ತೆ ಸುರಕ್ಷತಾ ತಜ್ಞರ ಸಮಿತಿಯನ್ನು ರಚಿಸಿತ್ತು. ಮೋಟಾರ್ ಸೈಕಲ್ಗಳು (ಸ್ಕೂಟರ್ ಹಾಗೂ ಇತರೆ ದ್ವಿಚಕ್ರ ವಾಹನಗಳು). ಮೂರು ಚಕ್ರದ ವಾಹನಗಳು (ಇ ಗಾಡಿಗಳು ಮತ್ತು ಇ ರಿಕ್ಷಾಗಳು). ಮೋಟಾರ್ ರಹಿತ ವಾಹನಗಳು. ಟ್ರೈಲರ್ಗಳ ಸಹಿತ ಹಾಗೂ ರಹಿತವಾದ ವಿಶೇಷ ಟ್ರ್ಯಾಕ್ಟರ್ಗಳು. ಮಲ್ಟಿ ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಹೀಗೆ ವೇಗ ಮಿತಿ ಕಡಿಮೆ ಇರುವ ವಾಹನಗಳಿಗೆ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಗಸ್ಟ್ 1 ರಿಂದ ಅಧಿಸೂಚನೆಯನ್ನು ಜಾರಿಗೆ ತರಲಾಗುವುದು ಮತ್ತು ಅಂತಹ ವರ್ಗದ ವಾಹನಗಳಿಗೆ ಪ್ರಯಾಣಿಸಲು ಪರ್ಯಾಯ ಮಾರ್ಗಗಳು ಮತ್ತು ರಸ್ತೆಗಳು ಲಭ್ಯವಿದೆ ಎಂದು ಎನ್ಎಚ್ಎಐ ತಿಳಿಸಿದೆ.ಎನ್ಎಚ್ಎಐ ಪ್ರಕಾರ, ಈ ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಹೈಸ್ಪೀಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಪ್ರವೇಶ ನಿಯಂತ್ರಿತ ಹೆದ್ದಾರಿಗೆ ವಿವಿಧ ವಿವರಣೆಗಳ ಮೋಟಾರು ವಾಹನಗಳಿಗೆ ಗರಿಷ್ಠ ವೇಗದ ಮಿತಿಗಳನ್ನು ಗಂಟೆಗೆ 80 ಕಿ.ಮೀ ನಡುವೆ ಬದಲಾಗುವಂತೆ ಸೂಚಿಸಲಾಗಿದೆ. 118 ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಯೋಜನೆಯನ್ನು ಈ ವರ್ಷದ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.