ಮಂಗಳವಾರದಂದು ಕೇರಳದ ಚೊಚ್ಚಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಅದೇ ದಿನ ಸಂಜೆ ಭಾರಿ ಮಳೆ ಸುರಿದಿದ್ದು, ಇದರ ಪರಿಣಾಮ ರೈಲಿನ ಚಾವಣಿಯಿಂದ ನೀರು ಜಿನುಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿರುವನಂತಪುರಂ – ಕಾಸರಗೋಡು ಮಾರ್ಗದ ಈ ರೈಲನ್ನು ಪ್ರಾಥಮಿಕ ಸರ್ವಿಸಿಂಗ್ ಬಳಿಕ ಕಣ್ಣೂರು ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ವೇಳೆ ಭಾರಿ ಮಳೆ ಬಂದ ಕಾರಣ ರೈಲಿನ ಎಸಿ ವೆಂಟ್ ಮೂಲಕ ಮಳೆ ನೀರು ಒಳಗೆ ಬಂದಿದೆ. ಬುಧವಾರ ಬೆಳಗ್ಗೆ ಇದು ಸಿಬ್ಬಂದಿ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದರು.
ಬಳಿಕ ರೈಲ್ವೆ ತಾಂತ್ರಿಕ ಸಿಬ್ಬಂದಿ ಸೋರಿಕೆಯನ್ನು ಸರಿಪಡಿಸಿದ್ದು, ಇದಾದ ನಂತರ ಬುಧವಾರ ಮಧ್ಯಾಹ್ನ 2:30 ರ ಸುಮಾರಿಗೆ ರೈಲು ತನ್ನ ಸಂಚಾರ ಆರಂಭಿಸಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಚಾವಣಿಯಿಂದ ನೀರು ಜಿನುಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸೋರಿಕೆಗೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.