72 ಪ್ರಯಾಣಿಕರ ಜೊತೆ ನೇಪಾಳದ ಯೇತಿ ಏರ್ ಲೈನ್ಸ್ ನ ವಿಮಾನ ದುರಂತದಲ್ಲಿ ಮಡಿದ ಸಹ ಪೈಲಟ್ ಅಂಜು ಖತಿವಾಡ ಅವರ ದುರಂತ ಹಿನ್ನೆಲೆ ಮನಕಲಕುತ್ತೆ. ಯೇತಿ ಏರ್‌ಲೈನ್ಸ್ ವಿಮಾನದ ಸಹ ಪೈಲಟ್ ಅಂಜು ಖತಿವಾಡ 16 ವರ್ಷಗಳ ಹಿಂದೆ ಇದೇ ರೀತಿಯ ವಿಮಾನ ಅಪಘಾತದಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು.
ಕಾಕತಾಳೀಯವಾಗಿ, ಅವರ ಪತಿ ಯೇತಿ ಏರ್‌ಲೈನ್ಸ್ ಗೆ ಸಹ ಪೈಲಟ್ ಆಗಿದ್ದರು. ಹದಿನಾರು ವರ್ಷಗಳ ಹಿಂದೆ ಜೂನ್ 21, 2006 ರಂದು, ನೇಪಾಲಗಂಜ್‌ನಿಂದ ಸುರ್ಖೇತ್ ಮೂಲಕ ಜುಮ್ಲಾಗೆ ತೆರಳುತ್ತಿದ್ದ ಯೇತಿ ಏರ್‌ಲೈನ್ಸ್ 9N AEQ ವಿಮಾನವು ಅಪಘಾತಕ್ಕೀಡಾಗಿತ್ತು. ಈ ವೇಳೆ ಆರು ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದರು.
ದುರಂತವೆಂದರೆ, ಅಂಜು ಖತಿವಾಡ ಅವರು ಪೈಲಟ್ ಆಗುವ ಕೆಲವೇ ಕ್ಷಣಗಳ ಮುಂಚೆ ದುರಂತ ಸಂಭವಿಸಿದೆ. ಭಾನುವಾರ ದುರಂತಕ್ಕೀಡಾದ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದರೆ ಅಂಜು ಖತಿವಾಡ ಪೈಲಟ್ ಆಗುತ್ತಿದ್ದರು. ವಿಮಾನವನ್ನು ಹಿರಿಯ ಕ್ಯಾಪ್ಟನ್ ಕಮಲ್ ಕೆಸಿ ಅವರು ಪತನಕ್ಕೀಡಾದ ವಿಮಾನದ ಪೈಲಟ್ ಅಗಿದ್ದು, ಅಂಜು ಸಹ ಪೈಲಟ್ ಆಗಿದ್ದರು.