ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಬದಲಿಗೆ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ರಚನೆ ಪ್ರಕ್ರಿಯೆ ಆರಂಭವಾಗಿದೆ.
ರಾಜ್ಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯ ಮೊದಲ ಸಭೆ ಗುರುವಾರ ನಡೆದಿದೆ. ಥೋರಟ್ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕಾಲಮಿತಿಯೊಳಗೆ ಸಮಗ್ರ ಪರಿಶೀಲನೆ ನಡೆಸಿ ದೇಶಕ್ಕೆ ಮಾದರಿಯಾಗುವಂಥ ರಾಜ್ಯ ಶಿಕ್ಷಣ ನೀತಿ ಕರಡು ಸಿದ್ಧಪಡಿಸಿಕೊಡಲು ಸಮಿತಿಗೆ ಮನವಿ ಮಾಡಿದ್ದಾರೆ.
ಎಸ್ಇಪಿ ರಚನೆಗೆ ಮುಂದಾಗಿರುವ ಉದ್ದೇಶ ವಿವರಿಸಿದ ಸಚಿವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವಂತಹ, ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಅವೈಜ್ಞಾನಿಕ ಅಂಶ ಒಳಗೊಂಡಿದೆ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಯ ಭಾರತಕ್ಕೆ ಏಕರೂಪ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಅಸ್ಮಿತೆ ಎತ್ತಿ ಹಿಡಿಯುವ, ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗ, ಶಿಕ್ಷಣ ನೀಡಿ ಸಾಮಾಜಿಕ, ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ವಾಸ್ತವಾಂಶ ಒಳಗೊಂಡ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದು ಮುಖ್ಯಮಂತ್ರಿಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಕರಡು ಸಿದ್ಧಪಡಿಸಿಕೊಡುವಂತೆ ಮನವಿ ಮಾಡಿದ್ದಾರೆ.