ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ 20 ವರ್ಷದ ಯುವತಿಯನ್ನ ರಾಜಸ್ತಾನ ಪೊಲೀಸರು ಪತ್ತೆಹಚ್ಚಿದ್ದಾರೆ. ಪೋಷಕರನ್ನು ನಂಬಿಸುವ ಯತ್ನದಲ್ಲಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯವಾಗಿದೆ.
ಪೊಲೀಸರ ಪ್ರಕಾರ ಕೋಟಾದಲ್ಲಿರುವ ತನ್ನ ಪಿಜಿ ಕೊಠಡಿಯಿಂದ ನಾಪತ್ತೆಯಾಗಿದ್ದ ಯುವತಿ 11 ದಿನಗಳ ನಂತರ ಪಂಜಾಬ್‌ನ ಲುಧಿಯಾನದಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕೌಶಂಬಿ ನಗರದ ನಿವಾಸಿ ತೃಪ್ತಿ ಸಿಂಗ್ ಎಂಬಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ನಂಬಿಸಿದ್ದಳು. ತನ್ನ ಹೆತ್ತವರು ಮತ್ತು ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ, ಪರೀಕ್ಷೆಯಲ್ಲಿ ಉತ್ತೀರ್ಣಳಾಗಲು ಸಾಧ್ಯವಾಗದ ಕಾರಣ ಚಂಬಲ್ ನದಿಗೆ ಹಾರಿ ತನ್ನ ಜೀವನವನ್ನು ಕೊನೆಗೊಳಿಸುವುದಾಗಿ ಹೇಳಿ ತನ್ನ ಪೋಷಕರಲ್ಲಿ ಕ್ಷಮೆಯಾಚಿಸಿ ಆತ್ಮಹತ್ಯೆ ಪತ್ರವನ್ನು ತನ್ನ ಕೋಣೆಯಲ್ಲಿಟ್ಟು ನಾಪತ್ತೆಯಾಗಿದ್ದಳು. ಹಾಸ್ಟೆಲ್ ಸಿಬ್ಬಂದಿ ಏಪ್ರಿಲ್ 23 ರಂದು ದೂರು ನೀಡಿದ ನಂತರ ಕೋಟಾ ಸಿಟಿ ಪೊಲೀಸ್ ವರಿಷ್ಠಾಧಿಕಾರಿ ಯುವತಿ ಹುಡುಕಲು ಪೊಲೀಸ್ ತಂಡಗಳನ್ನು ರಚಿಸಿದರು.
ಆತ್ಮಹತ್ಯೆ ನೋಟ್ ಪತ್ತೆಯಾದ ನಂತರ, ಎಸ್‌ಡಿಆರ್‌ಎಫ್ ಡೈವರ್‌ಗಳು ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಆತ್ಮಹತ್ಯೆ ಪತ್ರದ ಜೊತೆಗೆ ರಾಧಾ ಕೃಷ್ಣ ಹೆಸರನ್ನು ಬರೆದಿದ್ದ ಪತ್ರವೂ ಸಹ ಆಕೆಯ ಪಿಜಿ ಕೋಣೆಯಲ್ಲಿ ಪತ್ತೆಯಾಗಿತ್ತು ಇದರಿಂದ ಯುವತಿ ಈ ಹಿಂದೆ ಮಥುರಾಗೆ ಭೇಟಿ ನೀಡಿದ್ದಳು ಎಂಬುದನ್ನ ಪೊಲೀಸರು ಕಂಡುಕೊಂಡರು. ನಂತರ ಪೊಲೀಸ್ ತಂಡವನ್ನು ಕಳುಹಿಸಿ ಶೋಧಿಸಿದಾಗ ಯುವತಿ ಲುಧಿಯಾನಕ್ಕೆ ತೆರಳಿದ್ದಾಳೆ ಎಂಬುದು ಗೊತ್ತಾಯಿತು. ಪೊಲೀಸ್ ತಂಡವು ಲುಧಿಯಾನಕ್ಕೆ ತೆರಳಿ ಗುರುವಾರ ಸ್ವಿಚ್ ಮಾಡಿದ ಆಕೆಯ ಮೊಬೈಲ್ ಫೋನ್ ಆಧಾರದ ಮೇಲೆ ಯುವತಿಯನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಲಾಯಿತು.