ನವದೆಹಲಿ: ನಾವು ಸ್ಥಿರ ಸರ್ಕಾರ ನೀಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿ ಅಶೋಕ ಹೋಟೆಲ್ ನಲ್ಲಿ ನಡೆದ ಎನ್.ಡಿ.ಎ. ಮೈತ್ರಿಕೂಟದ ಸಭೆಯ ನಂತರ ಮಾತನಾಡಿದ ಅವರು, ಈ ಹಿಂದೆ ನಾವು ಸರ್ಕಾರವನ್ನು ವಿರೋಧ ಮಾಡಿರಲಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿದ್ದು, ನಾವು ಹೋರಾಟ ಮಾಡಿದ್ದೇವೆ. ಆಗ ಸರ್ಕಾರ ಕೆಡವಲು ನಾವು ವಿದೇಶಗಳ ಸಹಾಯ ಪಡೆಯಲಿಲ್ಲ ಎಂದು ಹೇಳಿದ್ದಾರೆ.
ಕೆಲವು ರಾಜ್ಯಗಳು ಕೇಂದ್ರದ ಯೋಜನೆಗಳನ್ನು ಜಾರಿ ಮಾಡುತ್ತಿಲ್ಲ. ಬಡವರ ಅಭಿವೃದ್ಧಿಯಲ್ಲೂ ರಾಜಕೀಯ ಲೆಕ್ಕಾಚಾರ ಹಾಕುತ್ತಾರೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಪರಿಸ್ಥಿತಿ ಬಂದಿತು.
ಬಡತನ ನಿರ್ಮೂಲನೆ ಎನ್.ಡಿ.ಎ. ಮೈತ್ರಿಕೂಟದ ಗುರಿ. ಎನ್.ಡಿ.ಎ. ದೇಶದ ಎಲ್ಲಾ ಜನರ ವಿಶ್ವಾಸ ಗಳಿಸಿದೆ. ಎನ್.ಡಿ.ಎ. ಯಾರನ್ನೂ ಅಧಿಕಾರದಿಂದ ಹೊರಗಿಡಲು ಮಾಡಿದ್ದಲ್ಲ. ಸ್ಥಿರ ಸರ್ಕಾರ ನೀಡಲು ಎನ್.ಡಿ.ಎ. ಒಕ್ಕೂಟ ನಿರ್ಮಾಣ ಮಾಡಲಾಗಿದೆ. ಬಡತನ ನಿರ್ಮೂಲನೆ ಮೈತ್ರಿಕೂಟದ ಗುರಿಯಾಗಿದೆ ಎಂದು ಹೇಳಿದ್ದಾರೆ.
ಮುಂದಿನ 25 ವರ್ಷಗಳಲ್ಲಿ ದೊಡ್ಡ ಗುರಿಯತ್ತ ಸಾಗಬೇಕಿದೆ. ಈ ಹಿಂದೆ ಬಡವರನ್ನು ಬಡವರಾಗಿ ಉಳಿಸುವ ಸಂಚು ಇತ್ತು. ಈ ಸಂಚನ್ನು ಎನ್.ಡಿ.ಎ. ಸರ್ಕಾರದ ಯೋಜನೆಗಳು ಛಿದ್ರಗೊಳಿಸಿವೆ. ದೇಶದ ಬಡವರು, ಯುವಕರು, ಮಹಿಳೆಯರು, ದಲಿತರು ಎನ್.ಡಿ.ಎ. ಮೈತ್ರಿಕೂಟದ ಜೊತೆಗೆ ಇದ್ದಾರೆ. ಕಾಂಗ್ರೆಸ್ ಮಹಾ ಮೈತ್ರಿ ಅನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಟೀಕಿಸಿದ್ದಾರೆ.
ವಿದೇಶಗಳು ಭಾರತದ ಮೇಲೆ ಭರವಸೆ ಇಟ್ಟಿವೆ. ಬೇರೆ ದೇಶಗಳಿಗೂ ಎನ್.ಡಿ.ಎ. ಮೇಲೆ ವಿಶ್ವಾಸವಿದೆ. ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಅಭಿವೃದ್ಧಿಯ ವಿಷಯ ಇಟ್ಟು ಜನರ ಬಳಿಗೆ ಸಾಗಬೇಕು. ಜನರ ಅಭಿವೃದ್ಧಿ ಭರವಸೆಯೆ ನಮ್ಮ ಗ್ಯಾರಂಟಿ. ನಮ್ಮ ಮೇಲೆ ಜನರ ವಿಶ್ವಾಸ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.