ನವದೆಹಲಿ: ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು 4 ವಾರಗಳಲ್ಲಿ ಘಟನೆಯ ಬಗ್ಗೆ ವಿವರವಾದ ವರದಿ ಸಲ್ಲಿಸಬೇಕು ಎಂದು ಮಾನವ ಹಕ್ಕು ಆಯೋಗ ಸೂಚಿಸಿದೆ.
ಎಫ್ಐಆರ್ ದಾಖಲಾತಿಯ ಸ್ಥಿತಿ, ತನಿಖೆಯ ಪ್ರಗತಿ, ಪ್ರಕರಣದಲ್ಲಿ ಬಂಧನ, ಸಂತ್ರಸ್ತರಿಗೆ ಪರಿಹಾರ ನೀಡಿದ್ದಲ್ಲಿ ಅದರ ಬಗ್ಗೆ ವಿವರ, ರಾಜ್ಯದಲ್ಲಿ ಈ ರೀತಿಯ ಘಟನೆಗಳನ್ನು ತಡೆಯಲು ಕೈಗೊಂಡ ಕ್ರಮಗಳು ಅಥವಾ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವರದಿ ಒಳಗೊಂಡಿರಬೇಕು ಎಂದು ತಿಳಿಸಲಾಗಿದೆ.
ಆಯೋಗದ ಡಿಐಜಿ ಶೀಘ್ರವಾಗಿ ಸತ್ಯಶೋಧನಾ ತಂಡ ರಚಿಸಿ ಘಟನೆ ನಡೆದ ಸ್ಥಳದಲ್ಲಿ ವಿಚಾರಣೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.