
ಮೈಸೂರು: ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರೂ ಪರಸ್ತ್ರೀ ಸಹವಾಸ ಮಾಡಿದ್ದ ಮಗನೊಬ್ಬ ತಂದೆಗೆ ಚಾಕು ಇರಿದು ಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಸರಗೂರು ತಾಲೂಕಿನ ಕಟ್ಟೆಹುಣಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ಮಗ ರಂಗಸ್ವಾಮಿ 83 ವರ್ಷದ ತಂದೆ ರಂಗಯ್ಯ ಎಂಬುವವರ ಎದೆ ಭಾಗಕ್ಕೆ ಚಾಕು ಇರಿದಿದ್ದಾನೆ.
ರಂಗಸ್ವಾಮಿಗೆ ವಿವಾಹವಾಗಿ ಪತ್ನಿ ಹಾಗೂ ವಯಸ್ಸಿಗೆ ಬಂದ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಪರಸ್ತ್ರೀ ಸಹವಾಸ ಮಾಡಿದ್ದ ಆತ ಮನೆಗೆ ಮಹಿಳೆಯನ್ನು ಕರೆತಂದಿದ್ದಾನೆ. ಇದರಿಂದ ಆಕ್ರೋಶಗೊಂಡ ಪೋಷಕರು ಮಗನಿಗೆ ಬುದ್ಧಿ ಹೇಳಿ ಬೈದಿದ್ದರು. ಇದರಿಂದ ಕೋಪಗೊಂಡ ರಂಗಸ್ವಾಮಿ ತಂದೆ-ತಾಯಿ ಮೇಲೆಯೇ ಹಲ್ಲೆಗೆ ಮುಂದಾಗಿದ್ದು, ತಂದೆಗೆ ಚಾಕುವಿನಿಂದ ಇರಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗಲಾಟೆ ನಡೆಯುತ್ತಿದ್ದಂತೆ ಅಕ್ಕ-ಪಕ್ಕದ ಮನೆಯವರು ರಂಗಯ್ಯನನ್ನು ರಕ್ಷಿಸಿದ್ದಾರೆ. ಗಾಯಾಳು ರಂಗಯ್ಯನನ್ನು ಹೆಚ್.ಡಿ.ಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.