
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಟ್ಟದ ಅರಣ್ಯ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ.
ಚಾಮುಂಡಿ ಬೆಟ್ಟದಿಂದ ಉತ್ತನಹಳ್ಳಿಗೆ ಹೋಗುವ ಮಾರ್ಗದ ಬೆಟ್ಟದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಿರುಬೇಸಿಗೆಯ ಧಗೆಯ ನಡುವೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಕ್ಷಣ ಕ್ಷಣಕ್ಕೂ ವ್ಯಾಪಿಸುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಕಾಡ್ಗಿಚ್ಚಿನಿಂದ ಸಂಭವಿಸಿರುವ ಅವಘಡವೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.