ಹಿಂದೂ ವ್ಯಕ್ತಿಯೊಬ್ಬರ ಹಣೆಗೆ ತಿಲಕವಿಟ್ಟರು ಎಂಬ ಕಾರಣಕ್ಕೆ ಮುಸ್ಲಿಂ ಕುಟುಂಬವೊಂದನ್ನು ಸಮುದಾಯ ಬಹಿಷ್ಕರಿಸಿರುವ ಘಟನೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಜರುಗಿದೆ.
ಘಟನೆ ಬಳಿಕ ಸಂತ್ರಸ್ತ ಆರೀಫ್ ಶಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಸಿಂಗ್ ಬಳಿ ದೂರು ಸಲ್ಲಿಸಿದ್ದಾರೆ. ಇದರನ್ವಯ ಕ್ರಮಕ್ಕೆ ಮುಂದಾದ ಎಸ್ಪಿ, ಆರಿಫ್ ವಿರುದ್ಧ ಇನ್ನಷ್ಟು ಬಹಿಷ್ಕಾರದ ಕೆಲಸ ಮಾಡಿದರೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ತೇಜ್ಘಡ್ ಎಂಬ ಊರಿನಲ್ಲಿ ಈ ಘಟನೆ ಸಂಭವಿಸಿದೆ. ಚುನಾವಣೆ ಸಂದರ್ಭದಲ್ಲಿ ತನ್ನ ಪಕ್ಕದ ಮನೆಯ ಹಿಂದೂಗಳೊಂದಿಗೆ ಸಂವಹನ ಮಾಡುತ್ತಿದ್ದ ಆರಿಫ್, ಈ ವೇಳೆ ತಮ್ಮ ನೆರೆಹೊರೆಯ ಮಂದಿಯ ಹಣೆಗೆ ತಿಲಕವಿಟ್ಟಿದ್ದರು.
ಇದಾದ ಬೆನ್ನಿಗೇ ತಮ್ಮ ಸಮುದಾಯವು ತಾನು ಆಚರಿಸುವ ಕಾರ್ಯಕ್ರಮಗಳು ಹಾಗೂ ಹಬ್ಬಗಳಿಗೆ ಅವಕಾಶ ಕೂಡದೇ ಇದ್ದಿದ್ದಲ್ಲದೇ, ತನ್ನ ಮನೆಯಲ್ಲಿ ತನ್ನ ತಾಯಿ ತೀರಿಕೊಂಡ ವೇಳೆ ಸಮುದಾಯದ ಯಾರೊಬ್ಬರೂ ಬರಲಿಲ್ಲವೆಂದು ಆರಿಫ್ ಬೇಸರಿಸಿಕೊಂಡಿದ್ದಾರೆ.
ಸಮುದಾಯದ ಮುಖಂಡರೊಂದಿಗೆ ಈಗ ಮಾತನಾಡಿ ವಿಷಯ ಇತ್ಯರ್ಥಪಡಿಸಿಕೊಂಡಿರುವುದಾಗಿ ತಿಳಿಸಿದ ಆರಿಫ್, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ.