ಬೆಳಗಾವಿ: ಬಿಜೆಪಿ ಶಾಸಕ ಮುನಿರತ್ನ ಬಂಧನದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಮತ್ತು ಕಾಂಗ್ರೆಸ್ ನಾಯಕಿ ಕುಸುಮಾ ಅವರ ಕೈವಾಡ ಇದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಶಿವು ತನ್ನ ವಿರುದ್ಧ ಯಾರಿದ್ದಾರೋ ಅವರೆಲ್ಲರ ಸಿಡಿ ಬಿಡುಗಡೆ ಮಾಡಿ ಜೈಲಿಗೆ ಕಳುಹಿಸುತ್ತಾರೆ. ಮುನಿರತ್ನ ಪ್ರಕರಣದ ಸತ್ಯ ಹೊರಬರಬೇಕಾದರೆ ಸಿಬಿಐ ತನಿಖೆ ನಡೆಯಬೇಕು. ನನ್ನ ಬಳಿಕ ಗೌಡರ ಕುಟುಂಬ, ಈಗ ಮುನಿರತ್ನ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಿಸಿದ್ದಾರೆ.
ಮೊದಲಿಗೆ ನನ್ನನ್ನು ಬಲಿ ತೆಗೆದುಕೊಂಡರು. ನಂತರ ದೇವೇಗೌಡರ ಕುಟುಂಬ, ಇದೀಗ ಮುನಿರತ್ನ ಅವರನ್ನು ಗುರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದವರ ಸಿಡಿ ಹೊರಬರುವುದರಲ್ಲಿ ಅಚ್ಚರಿ ಇಲ್ಲ. ಇದು ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಕೇಂದ್ರ ಗೃಹ ಸಚಿವರಿಗೆ ಪಕ್ಷಾತೀತ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.