ಮುಂಬೈ: ಕಂಡಿವಲಿಯಲ್ಲಿರುವ ಪ್ಲೇ ಸ್ಕೂಲ್‌ನ ಇಬ್ಬರು ಶಿಕ್ಷಕರು ಮಕ್ಕಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಶಿಕ್ಷಕರು, ವಿದ್ಯಾರ್ಥಿಗಳನ್ನು ಎಳೆದಾಡುವುದು, ಗುದ್ದುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.
ಇದೀಗ ಇಬ್ಬರೂ ಶಿಕ್ಷಕರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶಿಕ್ಷಕರು ಮಕ್ಕಳ ಕೆನ್ನೆಗೆ ಹೊಡೆದು, ಪದೇ ಪದೇ ಕಪಾಳಮೋಕ್ಷ ಮಾಡುತ್ತಾರೆ. ಪುಸ್ತಕಗಳಿಂದ ತಲೆಗೆ ಹೊಡೆಯುವುದನ್ನು ನೋಡಬಹುದು. ಪಾಲಕರು ಪೊಲೀಸರಿಗೆ ದೂರು ನೀಡಿದ್ದರು.
ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಎತ್ತಿಕೊಂಡು ನೆಲದ ಮೇಲೆ ಎಸೆಯುವುದನ್ನು ಕಾಣಬಹುದು. ಅಲ್ಲದೆ ನೆಲದ ಮೇಲೆ ಎಳೆದುಕೊಂಡು ಹೋಗುತ್ತಿದ್ದಾರೆ.
ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ, ವೈರಲ್ ಆಗಿದೆ ಮತ್ತು 463K ವೀಕ್ಷಣೆಗಳನ್ನು ಗಳಿಸಿದೆ. ಜನವರಿ 1 ರಿಂದ ಮಾರ್ಚ್ 27 ರ ನಡುವೆ ಮೂರು ತಿಂಗಳ ಅವಧಿಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶಿಕ್ಷಕರು ಈ ಹಿಂದೆಯೂ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರೆಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.