ಗಾರ್ಡನ್ ಸಿಟಿ ಸುತ್ತಬೇಕು ಅನ್ನೋ ಆಸೆಯಿಂದ ಇಬ್ಬರು ಅಪ್ರಾಪ್ತೆ ಬಾಲಕಿಯರು ಪಾಲಕರಿಗೆ ತಿಳಿಸದೇನೇ ಇಬ್ಬರು ಬಾಲಕರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಈಗ ನಾಲ್ವರನ್ನ ಸಹ ದೆಹಲಿಯ ಚುನಭಟ್ಟಿ ಪೊಲೀಸರು ಹುಡುಕಿ ಅವರವರ ಪಾಲಕರಿಗೆ ಒಪ್ಪಿಸಿದ್ದಾರೆ.
ಇಬ್ಬರು ಬಾಲಕಿಯರ ಒಬ್ಬಾಕೆಯ ತಂದೆಯಾದ ರಮೇಶ್ ವಿಷ್ಣು ಶಿಂಧೆ ತಮ್ಮ ಮಗಳು (13) ಹಾಗೆ ಆಕೆಯ ಸ್ನೇಹಿತೆ (15) ಕಾಣದಿದ್ದಾಗ ಸ್ಥಳೀಯ ಚುನಭಟ್ಟಿ ಪೊಲೀಸ್‌ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.
ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು ವಿಶೇಷ ತಂಡವೊಂದನ್ನ ರಚಿಸಿ, ತನಿಖೆ ಆರಂಭಿಸಿದರು. ಮೊದಲಿಗೆ ಅಕ್ಕಪಕ್ಕದ ಮನೆಯವರಿಗೆ ಮಕ್ಕಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಓರ್ವ ಬಾಲಕ, ವಿನೀತ್ ಶಿಂಧೆ ಎಂಬುವನೊಂದಿಗೆ ಬಾಲಕಿ ಮಾತನಾಡುತ್ತಿದ್ದು, ಆಕೆ ಬಂದು ಆತನ ಜೊತೆ ಡಬ್ಬವನ್ನ ತೆಗೆದುಕೊಂಡು ಹೋಗುತ್ತಿರುವುದನ್ನ ಗಮನಿಸಿದ್ದೇನೆ ಎಂದು ಹೇಳಿದ್ದ.
ಇದರ ಆಧಾರ ಮೇಲೆ ತನಿಖೆ ನಡೆಸಿದ ಪೊಲೀಸರು, ಆ ಸಮಯದಲ್ಲೇ ಅವರೆಲ್ಲ ಸೇರಿ ಬೆಂಗಳೂರಿಗೆ ಹೋಗುವ ಪ್ಲಾನ್ ಮಾಡಿರಬಹುದು ಎಂದು ಸುಳಿವು ಸಿಕ್ಕಿದೆ. ಆದ್ದರಿಂದ ತಕ್ಷಣವೇ , ಲೋಕಮಾನ್ಯ ತಿಲಕ್ ರೈಲ್ವೆ ಸ್ಟೇಷನ್‌ಗೆ ಹೋಗಿ ಸಿಸಿಟಿವಿಯನ್ನ ಪರಿಶೀಲಿಸಿದ್ದಾರೆ. ಅಲ್ಲಿ ಈ ಇಬ್ಬರು ಬಾಲಕಿಯರು ಸೇರಿ ಇನ್ನಿಬ್ಬರು ಬಾಲಕರೊಂದಿಗೆ ಕೊಯಮತ್ತೂರು ರೈಲು ಹತ್ತುತ್ತಿರುವ ದೃಶ್ಯ ಗಮನಕ್ಕೆ ಬಂದಿದೆ.
ನಂತರ ರೈಲಿನೊಳಗಿದ್ದ ಟಿಕೆಟ್ ಕಲೆಕ್ಟರ್ ಅವರನ್ನ ಸಂಪರ್ಕಿಸಲಾಗಿದೆ. ಆದರೆ ಆ ಸಮಯದಲ್ಲಿ ರೈಲ್ವೆ ಡಿಬೋರ್ಡ್ ಮಾಡಿದ್ದರು. ಆದ್ದರಿಂದ ರೈಲಿನ ಮುಂದಿನ ನಿಲುಗಡೆ ಕುರ್ದುವಾಡಿ ರೈಲ್ವೆ ನಿಲ್ದಾಣವಾಗಿದ್ದರಿಂದ ರೈಲ್ವೆ ಪೊಲೀಸರಿಗೆ ವಿಷಯವನ್ನ ಮುಟ್ಟಿಸಿದ್ದಾರೆ.
ತಕ್ಷಣವೇ ಎಚ್ಚೆತ್ತುಕೊಂಡ ರೈಲ್ವೆ ಪೊಲೀಸರು ಬೋಗಿಯನ್ನ ಪರಿಶೀಲಿಸಿ ಅದರಲ್ಲಿದ್ದ ನಾಲ್ವರನ್ನ ಕರೆದುಕೊಂಡು ಬಂದು ಚುನಭಟ್ಟಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರು ಮಕ್ಕಳೊಂದಿಗೆ ಮಾತುಕತೆ ನಡೆಸಿದಾಗ, ಪ್ರವಾಸಕ್ಕೆ ಹೋಗುತ್ತೇವೆ ಅಂದ್ರೆ ಅಪ್ಪ-ಅಮ್ಮ ಬಿಡುವುದಿಲ್ಲ ಅನ್ನೊ ಕಾರಣಕ್ಕೆ ಅವರಿಗೆ ಹೇಳದೆಯೇ ಮನೆಯಿಂದ ಹೊರಟಿದ್ದೆವು ಅಂತ ಹೇಳಿದ್ದಾರೆ. ಈಗ ಪೊಲೀಸರು ಅವರವರ ಪಾಲಕರಿಗೆ ಮಕ್ಕಳನ್ನ ಒಪ್ಪಿಸಿದ್ದಾರೆ.