ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು 14 ನಿವೇಶನಗಳನ್ನು ವಾಪಾಸ್ ನೀಡುವುದಾಗಿ ಪತ್ರ ಬರೆದಿದ್ದಾರೆ. ಸೈಟ್ ವಾಪಾಸ್ ನೀಡಿದ್ದು ಒಳ್ಳೆ ನಿರ್ಧಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸ್ವಾಭಾವಿಕವಾಗಿ ಮನೆಯಲ್ಲಿ ಯಜಮಾನರಿಗೆ ತೊಂದರೆಯಾಗುತ್ತಿದೆ ಎಂದು ಗೊತ್ತಾಗಿ ಅವರು ಸೈಟ್ ವಾಪಾಸ್ ಕೊಡಲು ನಿರ್ಧರಿಸಿದ್ದಾರೆ. ಒಳ್ಳೆ ನಿರ್ಧಾರ. ಸೈಟ್ ವಾಪಾಸ್ ಕೊಟ್ಟ ಮೇಲೆ ಕಾನೂನು ಪ್ರಕಾರ ಏನಾಗಲಿದೆ ಎಂಬುದು ಗೊತ್ತಿಲ್ಲ ನೋಡೋಣ ಎಂದರು.
ಸಿಎಂ ಪತ್ನಿ ಎಂದೂ ರಾಜಕೀಯವಾಗಿ ಹೊರಬಂದವರಲ್ಲ. ಸೈಟ್ ವಿಚಾರ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲದಕ್ಕಿಂತ ಮರ್ಯಾದೆ ಮುಖ್ಯ ಎನ್ನುವುದು ಅವರ ಭಾವನೆ. ಹಾಗಾಗಿ ಮುಡಾ ಸೈಟ್ ವಾಪಾಸ್ ಕೊಡುತ್ತಿದ್ದಾರೆ. ಅಲ್ಲದೇ ಪತ್ರದಲ್ಲಿ ಅವರು ಮನವಿಯನ್ನೂ ಮಾಡಿದ್ದಾರೆ. ಈ ವಿಚಾವಾಗಿ ರಾಜಕೀಯ ದುರುದ್ದೇಶದಿಂದ ಮಾತನಾಡಬೇಡಿ ಎಂದಿದ್ದಾರೆ. ಮಾತನಾಡುವವರು ನಿವೇಶನ ವಾಪಾಸ್ ಕೊಡದಿದ್ದರೂ ಮಾತನಾಡುತ್ತಾಎ. ಈಗ ಸೈಟ್ ವಾಪಾಸ್ ಕೊಟ್ಟರೂ ಅದರ ಬಗ್ಗೆಯೂ ಮಾತನಾಡುತ್ತಾರೆ. ಏನು ಮಾಡಿದರೂ ಎಲ್ಲಾ ವಿಚಾರಗಳು ಚರ್ಚೆಯಾಗುತ್ತವೆ. ಹೀಗೆ ಮೊಸರಲ್ಲಿ ಕಲ್ಲು ಹುಡುಕುತ್ತಾ ಹೋದರೆ ಎಲ್ಲಿಗೆ ಹೋಗಿ ನಿಲ್ಲುತ್ತೆ? ರಾಜಕೀಯ ದುರುದ್ದೇಶದಿಂದ ಎಲ್ಲದಕ್ಕೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.