ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಿಂದ ಹಂಚಿಕೆಯಾಗಿರುವ ನಿವೇಶನಗಳನ್ನು ಹಿಂಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ. ಈ ಮೂಲಕ ನಿವೇಶನ ಪಡೆದವರಿಗೆ ಆತಂಕ ಶುರುವಾಗಿದೆ.
ಮುಡಾ ಹಗರಣ ಆರಂಭವಾಗುತ್ತಿದ್ದಂತೆ ಮುಡಾದಿಂದ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದುಪಡಿಸುವಂತೆ ಬಿಜೆಪಿ ಶಾಸಕ ಶ್ರೀವತ್ಸ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಶಾಸಕರು ಬರೆದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ.
2020ರಲ್ಲಿ ಮುಡಾದಿಂದ ಹಂಚಿಕೆಯಾಗಿರುವ 50:50ರ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ಹಿಂಪಡೆಯುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. ಶಾಸಕ ಶ್ರೀವತ್ಸ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, 50:50ರಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ರದ್ದು ಮಾಡಿ ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ. ಇದರಿಂದ 50:50 ನಿವೇಶನ ಪಡೆದವರಿಗೆ ಆತಂಕ ಶುರುವಾಗಿದೆ.