ಮೈಸೂರು: ಮುಡಾ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಕೇಸ್ ಹಿಂಪಡೆಯುವಂತೆ ಸಿಎಂ ಪತ್ನಿ ಪಾರ್ವತಿ ಅವರ ಆಪ್ತರಿಂದ ಆಮಿಷವೊಡ್ಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ತಮ್ಮ ಹೋರಾಟ ಹತ್ತಿಕ್ಕಲು ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಎಂಡಿದ್ದ ಸ್ನೇಹಮಯಿ ಕೃಷ್ಣ, ತನ್ನ ಮಗನಿಗೆ ಹೋರಾಟದಿಂದ ಹಿಂದೆ ಸರಿಯುವಂತೆ ಆಮಿಷವೊಡ್ಡಲಾಗಿದೆ. ಪುತ್ರನ ಮನೆ ಬಳಿ ಬಂದ ಇಬ್ಬರು ವ್ಯಕ್ತಿಗಳು ಸಿಎಂ ಪತ್ನಿ ಪಾರ್ವತಿ ಆಪ್ತಸಹಾಯಕ ಎಂದು ಹೇಳಿ ಹಣದ ಆಮಿಷವೊಡ್ಡಿದ್ದಾಗಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ದೂರಿದ್ದರು. ಅಲ್ಲದೇ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿಯೂ ತಿಳಿಸಿದ್ದರು.
ಇದೀಗ ಆಮಿಷವೊಡ್ಡಿದ ಪ್ರಕರಣ ಸಂಬಂಧ ಸ್ನೇಹಮಯಿ ಕೃಷ್ಣ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಬಿಜೆಪಿ ಮುಖಂಡರಿಂದ ಆಮಿಷವೊಡ್ಡಲಾಗಿದೆ ಎಂದು ದೂರು ನೀಡಿದ್ದಾರೆ.
ಮೂಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ನಡುವೆಯೇ ಸ್ನೇಹಮಯಿ ಕೃಷ್ಣ, ಹೋರಾಟದಿಂದ ಹಿಂದೆ ಸರಿಯುವಂತೆ ಆಮಿಷವೊಡ್ಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಇದೀಗ ಲೋಕಾಯುಕ್ತ ತನಿಖೆಯಾಗಲಿ, ಸಿಬಿಐಗೆ ಬೇಡ ಎಂದು ಆಮಿಷವೊಡ್ಡುತ್ತಿರುವುದಾಗಿ ಹೇಳಿದ್ದರು. ಇದೀಗ ಲೋಕಾಯುಕ್ತ ದೂರಿನಲ್ಲಿ ಸ್ನೇಹಮಯಿಕೃಷ್ಣ, ಬಿಜೆಪಿ ಮುಖಂಡ ಹರ್ಷ ಎಂಬಾತ ಆಮಿಷವೊಡ್ದುತ್ತಿದ್ದು, ಲೋಕಾಯುಕ್ತ ತನಿಖೆ ನಡೆಸಲಿ, ಸಿಬಿಐ ತನಿಖೆಗೆ ಮನವಿ ಮಾಡದಂತೆ ಆಮಿಷವೊಡ್ಡಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಹರ್ಷ ಮೈಸೂರು ಚಾಮರಾಜನಗರದ ಬಿಜೆಪಿ ಮುಖಂಡನಾಗಿದ್ದು, ಸಿಎಂ ಪತ್ನಿ ಪಾರ್ವತಿ ಆಪ್ತ ಎಂದು ಹೇಳಿಕೊಂಡು ಆಮಿಷವೊಡ್ದುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬದಿದೆ.