
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಾಸಕ ಸೋಮಶೇಖರ್, ಮುಡಾದ ಪ್ರತಿ ಮೀಟಿಂಗ್ ನಲ್ಲಿ ಶಾಸಕರ ಫೈಲ್ ಗಳೇ ಇರುತ್ತಿದ್ದವು ಎಂದಿದ್ದಾರೆ.
ಶಾಸಕರ ಫೈಲ್ ಗಳೇ ಇರುತ್ತಿದ್ದವು. ಆದರೆ ಶಾಸಕರ ಹೆಸರಿನ ಫೈಲ್ ಗಳು ಚರ್ಚೆಯಾಗದೇ ಪಾಸ್ ಆಗುತ್ತಿದ್ದವು. ಮುಡಾ ಸಭೆಗಳ ಬಹುತೇಕ ವಿಷಯಗಳು ಶಾಸಕರಿಗೆ ಸೇರಿದ್ದವು. ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನು ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಇಲ್ಲಿಯ ಶಾಸಕರುಗಳು ಲಾಭಿ ಮಾಡುತ್ತಾರೆ.
ಮುಡಾ ನಿವೇಶನಗಳ ಉದ್ದೇಶವೇನು? ಜನಸಾಮಾನ್ಯರಿಗೋಸ್ಕರ ಇರುವುದು. ಬೇರೆಡೆ ನಿವೇಶನ ಪಡೆಯಲು ಸಾಧ್ಯವಾಗದಿದ್ದವರಿಗೆ ಮುಡಾ ನಿವೇಶನ ಹಂಚಿಕೆಯಾಗಬೇಕು ಎಂಬುದು ಮೂಲ ಉದ್ದೇಶ. ಆದರೆ ಮುಡಾದಲ್ಲಿ ಆಗುತ್ತಿರುವುದು ಏನು? ಉದ್ದೇಶವನ್ನೇ ಬದಲಿಸಿ ರಾಜಕಾರಣಿಗಳು ಸೈಟ್ ಮಾಡಿಕೊಳ್ಳುತ್ತಿದ್ದಾರೆ. ಮುಡಾ ವ್ಯವಸ್ಥೆ ಬದಲಾಗಬೇಕು ಎಂದು ಹೇಳಿದರು.
ನಾನು ಉಸ್ತುವಾರಿ ಸಚಿವನಾಗಿದ್ದಾಗ ಈ ಅವ್ಯವಹಾರ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೇ ಸೈಟ್ ಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಹಂಚುವಾಗ ಸಭೆ ಕರೆದು ಚರ್ಚೆ ಮಾಡಿ ಕೊಡಬೇಕು. ಈ ಯಾವ ನಿಯಮಗಳನ್ನು ಅಂದಿನ ಆಯುಕ್ತರು ಅನುಸರಿಸಿಲ್ಲ. ಹೀಗಾಗಿ ಅಂದು ಆಯುಕ್ತರನ್ನು ಬದಲಿಸುವಂತೆ ಸರ್ಕಾರಕ್ಕೆ ಹೇಳಿದ್ದೆ ಎಂದು ತಿಳಿಸಿದ್ದಾರೆ.